BANTWAL
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಂಟ್ವಾಳದ ಧನರಾಜ್ ಆಚಾರ್ಯ
ಬಂಟ್ವಾಳ ಸೆಪ್ಟೆಂಬರ್ .29 : ಕರಾವಳಿಯ ಕಲಾವಿದ ಗಿಚ್ಚಗಿಲಿಗಿಲಿ ಶೋ ಮೂಲಕ ಮನೆಮಾತಾಗಿರುವ ಬಂಟ್ವಾಳದ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ಟಿಕ್‌ಟಾಕ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದವರು. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.
ಸಾಮಾಜಿಸ ಜಾಲತಾಣ ಟಿಕ್ ಟಾಕ್ ನಲ್ಲಿ ಕಾಮಿಡಿ ವಿಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಇವರು ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಪ್ರಸಿದ್ದಿ ಪಡೆದಿದ್ದು, ಬಳಿಕ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್ಯ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ ಪ್ರಜ್ಞಾ ಆಚಾರ್ಯ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಹಾಸ್ಯದಷ್ಟೇ ಸಾಮಾಜಿಕ ಕಳಕಳಿಗೂ ಹೆಚ್ಚು ಒತ್ತು ನೀಡುವ ಧನರಾಜ್ ಪಂಪ್‌ವೆಲ್ ಫ್ಲೈ ಓವರ್, ಕಲ್ಲಡ್ಕ ಹೆದ್ದಾರಿ, ಉಳ್ಳಾಲ್‌ನ ಒಂಬತ್ತುಕೆರೆ ಪ್ರದೇಶದ ಸರ್ಕಾರಿ ಮನೆಗಳು ಹಾಗೂ ಸುಳ್ಯದಲ್ಲಿ ಉಂಟಾದ ವಿದ್ಯುತ್ ಸಮಸ್ಯೆಗಳ ಕುರಿತಾಗಿ ಸಿದ್ಧಪಡಿಸಿದ್ದ ವಿಡಿಯೋಗಳು ಅತ್ಯಂತ ಹೆಚ್ಚು ಟ್ರೋಲ್ ಆಗಿ ಆಡಳಿತ ವ್ಯವಸ್ಥೆಯ ಕಣ್ತೆರೆಸುವಲ್ಲಿಯೂ ಯಶಸ್ವಿಯಾಗಿದೆ.
ಬಿಗ್ ಬಾಸ್ ನಲ್ಲಿ ಇದೇ ಮೊದಲ ಬಾರಿಗೆ ಈ ಬಾರಿ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ಸ್ಪರ್ಧಿಗಳಿದ್ದಾರೆ. ಈಗಾಗಲೇ ಕುಂದಾಪುರದ ಚೈತ್ರಾ ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದ, ಇದೀಗ ಧನರಾಜ್ ಕೂಡ ಎಂಟ್ರಿ ಕೊಟ್ಟಿದ್ದಾರೆ.