DAKSHINA KANNADA
ಹತ್ಯೆಗೀಡಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಭೂಮಿ ಪೂಜೆ
ಪುತ್ತೂರು, ನವೆಂಬರ್ 02: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕನಸಾಗಿದ್ದ, ಹೊಸ ಮನೆಗೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ. ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೂತನವಾದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು, ಮುಂದಿನ ವರ್ಷದ ಮೇ ತಿಂಗಳ ಒಳಗೆ ಈ ಮನೆಯು ಗೃಹಪ್ರವೇಶವೂ ನಡೆಯಲಿದೆ.
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿದ್ದ ಪ್ರವೀಣ್ ಕುಟುಂಬದ ಹಳೆ ಮನೆಯನ್ನು ಕೆಡವಿ, ಆ ಜಾಗದಲ್ಲಿ ಹೊಸ ಮನೆಗೆ ಭೂಮಿ ಪೂಜೆ ನಡೆದಿದ್ದು, ಈ ಸಮಾರಂಭದಲ್ಲಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ ಸೇರಿದಂತೆ ಹಲವು ಜನಪ್ರತಿನಿಧಿಗಳು, ಹಿಂದೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
ಜುಲೈ 26 ರಂದು ತನ್ನ ಕೋಳಿ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರವೀಣ್ ಮೇಲೆ ಮೂವರು ತಲವಾರು ಬೀಸಿ ಹತ್ಯೆಗೈದಿದ್ದರು. ಪ್ರವೀಣ್ ಹತ್ಯೆ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣವನ್ನು ರಾಜ್ಯ ಸರಕಾರ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೋಲೀಸರು ತಂಡ ರಚಿಸಿ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರವೀಣ್ ಪ್ರಕರಣ ನಡೆದ ಬಳಿಕ ಇಡೀ ದೇಶದಲ್ಲಿ ಪಿಎಫ್ಐ ಸಂಘಟನೆಗೆ ಸೇರಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಪಿಎಫ್ಐ ಸಂಘಟನೆಯನ್ನು ದೇಶದಾದ್ಯಂತ ನಿಶೇಧ ಮಾಡಲಾಗಿದೆ. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ. ಪ್ರವೀಣ್ ಹತ್ಯೆಯಲ್ಲಿ ನೇರವಾಗಿ ಅಥವಾ ಇನ್ನಾವುದೇ ರೀತಿಯಲ್ಲಿ ಭಾಗಿಯಾಗಿದ್ದರೂ ಅಂಥವರನ್ನು ಬಂಧಿಸಬೇಕೆಂದು ಸರಕಾರಕ್ಕೂ ಒತ್ತಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ,ಮಂಗಳೂರು ಸಂಸದ ನಳಿನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರವೀಣ್ ನೆಟ್ಟಾರು ಪಕ್ಷದ ಕಾರ್ಯಕರ್ತನಾಗಿದ್ದು, ಆತನಿಗಿದ್ದ ಹೊಸ ಮನೆಯ ಕನಸನ್ನು ನನಸು ಮಾಡಲು ಪಕ್ಷ ಸಿದ್ಧವಾಗಿದೆ. ಬಿಜೆಪಿ ಪಕ್ಷದ ವತಿಯಿಂದ ಈಗಾಗಲೇ ಪ್ರವೀಣ್ ಕುಟುಂಬಕ್ಕೆ 25 ಲಕ್ಷ ನೀಡಲಾಗಿದ್ದು, ಸರಕಾರದಿಂದಲೂ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಅಲ್ಲದೆ ಪ್ರವೀಣ್ ನೆಟ್ಟಾರು ಕಾರ್ಯಾಚರಿಸುತ್ತಿದ್ದ ಯುವ ಮೋರ್ಚಾದಿಂದ 15 ರೂಪಾಯಿಗಳ ಪರಿಹಾರ ನೀಡಲಾಗಿದೆ. ಇದೀಗ ಮನೆ ಕಟ್ಡುವ ಜವಾಬ್ದಾರಿಯನ್ನೂ ಪಕ್ಷ ತೆಗೆದುಕೊಂಡಿದ್ದು, ಸುಮಾರು 40 ರಿಂದ 50 ಲಕ್ಷ ಅಂದಾಜಿನಲ್ಲಿ ಸುಮಾರು 2700 ಸ್ಕ್ವೇರ್ ಫೀಟ್ ನ ಮನೆ ನಿರ್ಮಾಣವಾಗಲಿದೆ. ಮುಂದಿನ ವರ್ಷದ ಮೇ ತಿಂಗಳ ಒಳಗಾಗಿ ಮನೆಯನ್ನು ಪೂರಗಣ ಮಾಡಿ ಕೊಡಲಾಗುವುದು ಎಂದು ನಳಿನ್ ಕುಮಾರ್ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಪ್ರವೀಣ್ ಸಾವಿನ ಬಳಿಕ ಸಮಾಜ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿದೆ. ಹತ್ಯೆಯ ಹಿಂದೆ ಇರುವ ಇನ್ನಷ್ಟು ಆರೋಪಿಗಳು ಇನ್ನೂ ಸಿಕ್ಕಿಲ್ಲ. ಮನೆ ಮಂದಿಗೆ ಸಹಕಾರ ಮಾಡಿದಂತೆ, ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟುವ ವ್ಯವಸ್ಥೆಗೂ ಸಮಾಜ ಕೈಜೋಡಿಸಬೇಕಿದೆ ಎಂದು ಪ್ರವೀಣ್ ಪತ್ನಿ ನೂತನ್ ಮನವಿ ಮಾಡಿದ್ದಾರೆ.
ಪ್ರವೀಣ್ ಹಂತಕರು ಯಾವ ರೀತಿ ನಮ್ಮ ಮಗನನ್ನು ಕೊಂದಿದ್ದಾರೋ, ಅದೇ ರೀತಿಯ ಶಿಕ್ಷೆ ಆರೋಪಿಗಳಿಗೆ ಆಗಬೇಕಿದೆ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ಸಿಗದಂತೆ ಮಾಡಿದರೆ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದು ಪ್ರವೀಣ್ ಪೋಷಕರು ಮನವಿ ಮಾಡಿದ್ದಾರೆ. ಈ ನಡುವೆ ಪ್ರವೀಣ್ ಹತ್ಯೆ ಹಿಂದೆ ಇರುವ ಆರೋಪಿಗಳ ಬಂಧನಕ್ಕೆ ಎನ್.ಐ.ಎ ಈಗಾಗಲೇ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ. ನಾಲ್ಕು ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ನೀಡಲು ತನಿಖಾ ಸಂಸ್ಥೆ ಮುಂದಾಗಿದೆ.