KARNATAKA
ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೇಸ್ ಮುಖಂಡ ಸಂಪತ್ ರಾಜ್ ಆರೆಸ್ಟ್
ಬೆಂಗಳೂರು ನವೆಂಬರ್ 17 : ಸಾಮಾಜಿಕ ಜಾಲತಾಣದಲ್ಲಿನ ವಿವಾದಿತ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಅಗಸ್ಟ್ 11 ರಂದು ನಡೆದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಬಿಬಿಎಂಪಿ ಮಾಜಿ ಮೇಯರ್ ಕಾಂಗ್ರೇಸ್ ಮುಖಂಡ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಸೆರೆಗಾಗಿ ಸಿಸಿಬಿಯಿಂದ ಐದು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರ ಸಂಪತ್ ರಾಜ್ ಆಪ್ತ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಮಾಹಿತಿ ಕಲೆಹಾಕಿದ್ದರು. ಕಳೆದ 24 ದಿನಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ಸುತ್ತಾಡಿದ್ದ ಸಂಪತ್ ರಾಜ್ ಸ್ನೇಹಿತನ ಮನೆಗೆಂದು ಬಂದಿರುವುದು ಗೊತ್ತಾಗಿದ್ದು ಪೊಲೀಸರು ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿ ಬಲೆಗೆ ಕೆಡವಿದ್ದಾರೆ.
ವಿವಾದಿತ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಆಗಸ್ಟ್ 11 ರಂದು ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಯಾಗಿತ್ತು. ಸಾವಿರಾರು ಜನರು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಗೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಅಲ್ಲದೆ, ಈ ವೇಳೆ ಸಾಕಷ್ಟು ವಾಹನಗಳು ಬೆಂಕಿಗೆ ಆಹುತಿಯಾಗಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಹಾನಿಯುಂಟಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 421 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮೇಲಿನ ದ್ವೇಷದಿಂದ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಗಲಭೆಗೆ ಪ್ರೇರಣೆ ನೀಡಿದ್ದ ಎಂದು ಪೊಲೀಸರು ಪತ್ತೆಮಾಡಿದ್ದು ಆರೋಪಿಯೆಂದು ಗುರುತಿಸಿ ಬಂಧಿಸಿದ್ದರು. ಆದರೆ, ಸಂಪತ್ ರಾಜ್ ಬಂಧನಕ್ಕೊಳಗಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಲ್ಲದೆ ಅಲ್ಲಿಂದ ಪರಾರಿಯಾಗಿದ್ದ. ಈ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಲ್ಲಿ ಆರೋಪ – ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.