BELTHANGADI
ಬೆಳ್ತಂಗಡಿ : ಕುತ್ಲೂರು ಗ್ರಾಮದ ಆದಿವಾಸಿಗಳ ಮಲೆ ಸಂಪರ್ಕಿಸುವ ಮುರಿದು ಬಿದ್ದ ಸೇತುವೆಯ ಮರು ಸ್ಥಾಪನೆಗೆ ಡೆಡ್ ಲೈನ್ ನೀಡಿದ ಹೋರಾಟ ಸಮಿತಿ
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕುತ್ಲೂರು ಗ್ರಾಮದ ಆದಿವಾಸಿಗಳ ಮಲೆ ಸಂಪರ್ಕಿಸುವ ಮುರಿದು ಬಿದ್ದ ಸೇತುವೆಯ ಮರು ಸ್ಥಾಪನೆಗೆ ಹೋರಾಟ ಸಮಿತಿ ಡೆಡ್ ಲೈನ್ ನೀಡಿದೆ.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಅವರ ನೇತೃತ್ವದ ನಿಯೋಗ ಮಂಗಳವಾರ ಕುತ್ಲೂರು ಪ್ರದೇಶಕ್ಕೆ ತೆರಳಿ ಗ್ರಾಮಸ್ಥರ ಅಹವಾಲು ಕೇಳಿದರು. ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಆದಿವಾಸಿಗಳ ಮಲೆಗೆ ತೆರಳುವ ರಸ್ತೆಯ ಸೇತುವೆ ಕುಸಿದು ಬಿದ್ದು ಎರಡು ವರ್ಷಗಳು ಸಂದಿದೆ. ಮಳೆ ಹಾನಿಯ ಪಟ್ಟಿಯಲ್ಲಿ ಈ ಸೇತುವೆ ಕುಸಿತವನ್ನು ದಾಖಲಿಸಿ, ಹೊಸ ಸೇತುವೆ ನಿರ್ಮಾಣಕ್ಕೆ 1 ಕೋಟಿ 90 ಲಕ್ಷ ರೂಪಾಯಿ ಎಸ್ಟಿಮೇಟ್ ಸಿದ್ದಪಡಿಸಿದ್ದು ಬಿಟ್ಟರೆ ಸೇತುವೆ ಮರು ನಿರ್ಮಾಣಕ್ಕೆ ಬೇಕಾದ ಕನಿಷ್ಟ ಪ್ರಾಥಮಿಕ ಕೆಲಸಗಳೂ ಸಂಬಂಧ ಪಟ್ಟ ಇಲಾಖೆಗಳು ನಡೆಸಿಲ್ಲ. ಜಿಲ್ಲಾ ಪಂಚಾಯತ್ ಗೆ ಸೇರಿದ ಈ ಸೇತುವೆಗೆ ವಿಶೇಷ ಅನುದಾನ ಬೇಕಿದ್ದು, ಸ್ಥಳೀಯ ಶಾಸಕರು ಮುತುವರ್ಜಿ ವಹಿಸಬೇಕಿತ್ತು.
ಆದರೆ, ಸ್ಥಳೀಯ ಶಾಸಕ ಹರೀಶ್ ಪೂಂಜಾ ಈ ಆದಿವಾಸಿ ಮಲೆಕುಡಿಯರ ನಾಡಿನ ಸಂಪರ್ಕದ ಈ ಮುರಿದ ಸೇತುವೆಯನ್ನು ಕಣ್ಣೆತ್ತಿಯೂ ನೋಡಿಲ್ಲ. ಈ ಮಳೆಗಾಲದಲ್ಲಿ ಬೆಳ್ತಂಗಡಿಯ ಈ ರೀತಿಯ ಕುಗ್ರಾಮಗಳಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಮುರಿದಿದ್ದು ಶಾಸಕ ಪೂಂಜಾ ಅವರಿಗೆ ದಲಿತರು, ಆದಿವಾಸಿಗಳು, ಬಡವರು ವಾಸಿಸುವ ಪ್ರದೇಶದ ಮುರಿದ ಸೇತುವೆಗಳ ಕುರಿತು ಗಮನ ಹರಿಸಬೇಕು ಎಂದು ಅನಿಸಿಯೇ ಇಲ್ಲ. ಇದೊಂದು ಸಮಸ್ಯೆ ಎಂದೂ ಅವರು ಪರಿಗಣಿಸಿದಂತಿಲ್ಲ.
ಎರಡು ವರ್ಷದ ಹಿಂದೆ ಕುಸಿದು ಬಿದ್ದಿರುವ ಕುತ್ಲೂರು ಸೇತುವೆಯನ್ನು ತಕ್ಷಣ ಮರು ನಿರ್ಮಾಣಗೊಳಿಸಬೇಕು ಎಂದು ಒತ್ತಾಯಿಸಿ ಇಂದು ಮುರಿದ ಸೇತುವೆಯಲ್ಲಿ ಕೂತು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಬಂದ ಅಧಿಕಾರಿಗಳು ಮನವಿ ಸ್ಚೀಕರಿಸಿ ಅಸಹಾಯಕತೆ ತೋಡಿಕೊಂಡರು. ಪ್ರತಿಭಟನೆ ತರುವಾಯ ಗ್ರಾಮದ ಮುಖಂಡರ ಜೊತೆ ಸಮಾಲೋಚಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.ಮುಂದಿನ ತಿಂಗಳು ನಾರಾವಿ ಗ್ರಾಮ ಪಂಚಾಯತ್ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.