LATEST NEWS
ಕೆರೆಗೆ ಎಸೆದಿದ್ದ ಮಗುವನ್ನು ರಕ್ಷಿಸಿದ ಗಂಟೆ ಹೂವುಗಳು!
ಬರೇಲಿ, ಮಾರ್ಚ್ 04: ಉತ್ತರ ಪ್ರದೇಶದ ಬಡುವಾನ್ ಜಿಲ್ಲೆಯಲ್ಲಿ 20 ಅಡಿ ಆಳದ ಬಾವಿಗೆ ಎಸೆಯಲ್ಪಟ್ಟ ನವಜಾತ ಶಿಶುವನ್ನು ರಕ್ಷಿಸಿದ ಬೆನ್ನಲ್ಲೇ, ಬರೇಲಿ ಜಿಲ್ಲೆಯ ಕಟೂವಾ ಗ್ರಾಮದ ಕೆರೆಯೊಂದಕ್ಕೆ ಎಸೆಯಲ್ಪಟ್ಟ ಎರಡು ದಿನಗಳ ಹೆಣ್ಣುಮಗುವೊಂದು ಪವಾಡ ಸದೃಶ್ಯವಾಗಿ ಬದುಕಿ ಉಳಿದಿರುವ ಘಟನೆ ಬೆಳಕಿಗೆ ಬಂದಿದೆ.
ಆಳವಾದ ನೀರಿನಲ್ಲಿ ಮಗುವಿನ ಅಳು ಕೇಳಿ ಬಂದ ತಕ್ಷಣ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೆರೆ ದಂಡೆಯಿಂದ ಹದಿನೈದು ಅಡಿ ಆಳದಲ್ಲಿ ಇದ್ದ ಮಗು ಎಸೆಯಲ್ಪಟ್ಟಾಗ, ಕೆರೆಯಲ್ಲಿದ್ದ ಗಂಟೆ ಹೂವುಗಳ ರಾಶಿ (ಹಯಸಿಂಟ್) ಮಗುವನ್ನು ಮುಳುಗದಂತೆ ರಕ್ಷಿಸಿದೆ. ಮಗುವನ್ನು ಆ ಬಳಿಕ ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು
ಪೊಲೀಸರು ತಕ್ಷಣ ಮಗುವನ್ನು ನವಾಬ್‍ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆ ಬಳಿಕ ಮಗುವನ್ನು ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿಗೆ ಯಾವುದೇ ಗಾಯಗಳಾಗಿಲ್ಲ.
ಗುರುವಾರ ಖಟೂವಾ ಗ್ರಾಮದ ವಕೀಲ್ ಅಹ್ಮದ್ ಎನ್ನುವವರು ಹೊಲಕ್ಕೆ ಹೋಗುತ್ತಿದ್ದಾಗ, ಕೆರೆಯಲ್ಲಿ ಮಗುವನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ನವಜಾತ ಶಿಶುವನ್ನು ಅವರು ರಕ್ಷಿಸಿದ ಸುದ್ದಿ ಊರಲ್ಲಿ ಹಬ್ಬಿತು. ಈ ಪವಾಡವನ್ನು ವೀಕ್ಷಿಸಲು ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಅಗಮಿಸಿದರು. ಗಂಟೆ ಹೂವಿನ ಮಧ್ಯದಲ್ಲಿ ಸುರಕ್ಷಿತವಾಗಿ ಇದ್ದ ಮಗುವಿನ ವಿಡಿಯೊ ವೈರಲ್ ಆಗಿದೆ.
“ಮಗು ಗಂಟೆಹೂವಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಮಗು ಮುಳುಗುವುದು ತಪ್ಪಿತು. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಬರೇಲಿಯ ಆಶ್ರಮಕ್ಕೆ ಕಳುಹಿಸಲಾಗಿದೆ. 72 ಗಂಟೆಗಳ ಕಾಲ ಪೋಷಕರಿಗಾಗಿ ಕಾಯಲಾಗುತ್ತದೆ. ಯಾರೂ ಮುಂದೆ ಬಾರದಿದ್ದರೆ ಮುಂದೆ ಪ್ರಕರಣ ದಾಖಲಿಸಲಾಗುತ್ತದೆ” ಎಂದು ಹೆಚ್ಚುವರಿ ಎಸ್ಪಿ ರಾಜಕುಮಾರ್ ಅಗರ್‍ವಾಲ್ ಹೇಳಿದ್ದಾರೆ.