Connect with us

BELTHANGADI

ಕೊನೆಗೂ ಪತ್ತೆಯಾದ ಬೆಳಾಲು ಕಾಡಿನಲ್ಲಿ ಸಿಕ್ಕ ಮಗುವಿನ ಪೋಷಕರು – ಮಗುವನ್ನು ಕಾಡಿನಲ್ಲಿ ಬಿಡಲು ಕಾರಣ…?

ಬೆಳ್ತಂಗಡಿ ಎಪ್ರಿಲ್ 03: ಬೆಳಾಲು ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವಿನ ಪೋಷಕರನ್ನು ಪತ್ತೆ ಮಾಡುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಮಗುವಿನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.


ಸದ್ಯ ಪೊಲೀಸರ ಮಾಹಿತಿ ಪ್ರಕಾರ ಮಗುವಿನ ಪೋಷಕರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಯ ನಿವಾಸಿ ತಿಮ್ಮಪ್ಪ ಗೌಡರ ಮಗ‌ ಧರ್ಮಸ್ಥಳದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ರಂಜಿತ್ ಗೌಡ (27) ಮತ್ತು ಧರ್ಮಸ್ಥಳ ಗ್ರಾಮದ ಕೊಲಂಗಾಜೆಯ ನಿವಾಸಿ ಸುಶ್ಮಿತಾ ಎಂದು ಗುರುತಿಸಲಾಗಿದೆ‌. ರಂಜಿತ್ ಗೌಡ (27) ಮತ್ತು ಮಂಗಳೂರಿನಲ್ಲಿ ಬ್ಯೂಟಿಪಾರ್ಲರ್ ಒಂದರಲ್ಲಿ ಉದ್ಯೋಗದಲ್ಲಿದ್ದ ಸುಶ್ಮಿತಾ ಗೌಡ (22) ಪರಸ್ಪರ ಪ್ರೀತಿಸಿದ್ದರು. ಮದುವೆಯಾಗುವ ಭರವಸೆ ನೀಡಿ ರಂಜಿತ್ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಅವರಿಗೆ ಹೆಣ್ಣು ಶಿಶು ಜನಿಸಿತ್ತು. ನಂತರ ಅವರಿಬ್ಬರ ನಡುವೆ ಮನಃಸ್ತಾಪ ಉಂಟಾಗಿತ್ತು. ಯುವತಿ ಮಗುವನ್ನು ರಂಜಿತ್ ಗೌಡನ ಮನೆಗೆ ತಂದು ಬಿಟ್ಟು ಹೋಗಿದ್ದರು. ಆತ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 22 ರಂದು ಬೆಳಾಲಿನ ಕಾಡು ಪ್ರದೇಶದಲ್ಲಿ ಪತ್ತೆಯಾದ ಮಗುವನ್ನು ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿದ್ದರು. ನಂತರ ಧರ್ಮಸ್ಥಳ ಪೊಲೀಸರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಅಶ್ರಮಕ್ಕೆ ಹಸ್ತಾಂತರಿಸಿದ್ದರು.

ಅಪರಿಚಿತ ಹೆಣ್ಣು ಮಗು ಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆಗಿಳಿದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್. ಗಾಣಿಗೇರಾ ಮತ್ತು ತಂಡಕ್ಕೆ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದು, ಎಪ್ರಿಲ್ 2 ರಂದು ರಾತ್ರಿ ಮಗುವಿನ ತಂದೆ ಬೆಳಾಲು ನಿವಾಸಿ ರಂಜಿತ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ವುತ್ತಿದ್ದಂತೆಯೇ ಇದೀಗ ಇಬ್ಬರು ಕೂಡ ಸ್ವಇಚ್ಛೆಯಿಂದ ಒಂದು ವಾರದೊಳಗೆ ಮದುವೆಯಾಗುವುದಾಗಿ ಪೋಲಿಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಮುಂದೆ ಇಬ್ಬರ ಕುಟುಂಬಸ್ಥರು ಒಪ್ಪಿರುವುದಾಗಿ ತಿಳಿದು ಬಂದಿದೆ.

ರಂಜಿತ್ ಮತ್ತು ಸುಶ್ಮೀತಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಚಾರ ಎರಡು ಮನೆಯವರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಸುಶ್ಮಿತಾ ಗರ್ಭಿಣಿಯಾಗಿದ್ದು, ರಂಜಿತ್ ಸುಶ್ಮಿತಾಗೆ ಬಾಡಿಗೆ ಮನೆ ಮಾಡಿಕೊಟ್ಟಿದ್ದು, ಯಾರಿಗೂ ತಿಳಿಯದಂತೆ ಮಗುವನ್ನು ಹೆತ್ತಿದ್ದರು. ಮದುವೆಯಾಗದ ಕಾರಣ ಕುಟುಂಬದವರಿಗೆ ಹೆದರಿ ಮಗುವನ್ನು ಕಾಡಿಗೆ ಬಿಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇದಲ್ಲದೆ ಇಬ್ಬರ ಮನೆಗಳಿಗೂ ಪೊಲೀಸರು ಬರುವವರೆಗೂ ಈ ವಿಚಾರದ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎನ್ನಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ತಂದೆ-ತಾಯಿಯ ವಿಚಾರಣೆ ಬಳಿಕ ತಿಳಿದು ಬರಬೇಕಾಗಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *