KARNATAKA
ಬೆಳಗಾವಿ – ಕ್ಷುಲ್ಲಕ ಕಾರಣಕ್ಕೆ ಗೋವಾದ ಮಾಜಿ ಶಾಸಕನ ಕೊಲೆ

ಬೆಳಗಾವಿ ಫೆಬ್ರವರಿ 15: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೊಬ್ಬ ಗೋವಾದ ಮಾಜಿ ಶಾಸಕನಿಗೆ ಹಲ್ಲೆ ನಡೆಸಿ ಅವರ ಸಾವಿಗೆ ಕಾರಣನಾಗಿದ್ದಾನೆ. ಬೆಳಗಾವಿಯ ಖಡೇಬಜಾರ್ ನಲ್ಲಿ ಇರೋ ಶ್ರೀನಿವಾಸ ಲಾಡ್ಜ್ ಮುಂದೆ ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೂ ಮಾಮಲೇದಾರ್ ಎನ್ನುವರು ಸಾವನಪ್ಪಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೇ ಲಾವೂ ಮಾಮಲೇದಾರ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಪರಿಣಾಮ ಮಾಜಿ ಶಾಸಕ ಲಾವೂ ಮಾಮಲೇದಾರ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ತಾಗಿದೆ. ಕಾರಿನಲ್ಲಿ ಶ್ರೀನಿವಾಸ ಲಾಡ್ಜ್ ಕಡೆಗೆ ಲಾವೂ ಮಾಮಲೇದಾರ್ ಬಂದಿದ್ದರು. ಆಗ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಮೆಟ್ಟಿಲು ಏರಿ ಲಾಡ್ಜ್‌ನಲ್ಲಿರುವ ರೂಮ್‌ಗೆ ಹೊರಟಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.