LATEST NEWS
ಮಂಗಳೂರು – ಖ್ಯಾತ ಕೊಂಕಣಿ ಗಾಯಕಿ ಹೆಲೆನ್ ಡಿ ಕ್ರೂಜ್ ಇನ್ನಿಲ್ಲ

ಮಂಗಳೂರು ಫೆಬ್ರವರಿ 15: ಯೇ ಯೇ ಕತ್ರಿನಾ’ ಖ್ಯಾತಿಯ ಕೊಂಕಣಿ ಗಾಯಕಿ ಹೆಲೆನ್ ಡಿ ಕ್ರೂಜ್ ಅವರು ನಿಧನರಾಗಿದ್ದಾರೆ. ಕೊಂಕಣಿ ಭಾಷೆಯ ಗಾಯಕಿಯಾಗಿ ಪ್ರಪಂಚದಾದ್ಯಂತ ಅವರು ಖ್ಯಾತಿ ಪಡೆದಿದ್ದರು.
ಆಫ್ರಿಕಾದಲ್ಲಿ ಜನಿಸಿದ ಹೆಲೆನ್ ಅವರ ತಂದೆ ವೈದ್ಯರಾಗಿದ್ದರು. ಈ ಹಿನ್ನಲೆ ಆಫ್ರಿಕಾದಲ್ಲೇ ಅವರ ಕುಟುಂಬ ವಾಸವಿತ್ತು. ಅವರ ತಂದೆ ವಯಲಿನಿಸ್ಟ್ , ಹಾಗು ಆಕೆಯ ಮೂವರು ಸಹೋದರರು ಸಂಗೀತ ಹಿನ್ನೆಲೆಯುಳ್ಳವರಾಗಿದ್ದರು.
ಬಳಿಕ ಮುಂಬೈಗೆ ಬಂದ ನಂತರ ಹೆಲೆನ್ ಅವರು ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದರು. ಈ ವೇಳೆ ಆರ್ ಇಂಡಿಯಾ ರೇಡಿಯೋ ದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಆಡಿಷನ್ ನೀಡಿ ಆಯ್ಕೆಯಾಗಿದ್ದರು. ಇವರು ಆಲ್ ಇಂಡಿಯಾ ರೆಡಿಯೋ ಗೆ ಆಯ್ಕೆಯಾದ ಮೊದಲ ಮಂಗಳೂರಿನ ಮಹಿಳಾ ಕೊಂಕಣಿ ಗಾಯಕಿಯಾಗಿದ್ದರು. 1971ರ ಸುಮಾರಿಗೆ, ಹೆಲೆನ್ ತನ್ನ ಮೊದಲ ಯುಗಳ ಗೀತೆಯಾದ ಯೇ ಯೇ ಕತ್ರಿನಾವನ್ನು ರೆಕಾರ್ಡ್ ಮಾಡಿದರು. ಅದು ವಿಶ್ವಾದ್ಯಂತ ಅಪಾರ ಜನಪ್ರಿಯವಾಯಿತು. ಸಾರ್ವಜನಿಕ ಬೇಡಿಕೆಯಿಂದಾಗಿ, ಆಕಾಶವಾಣಿಯು ನಾಲ್ಕು ವರ್ಷಗಳ ಕಾಲ ಪ್ರತಿದಿನ ಹಾಡನ್ನು ಪ್ರಸರಿಸಿತು. ಇದು ಅವರ ಅಭೂತಪೂರ್ವ ಸಾಧನೆಯಾಗಿದೆ.

ಅದೇ ಸಮಯದಲ್ಲಿ ಹೆಲೆನ್ ತನ್ನ ಮೊದಲ ಹಿಸ್ ಮಾಸ್ಟರ್ಸ್ ವಾಯ್ಸ್ (ಎಚ್ಎಂವಿ) ಎಲ್ಪಿ ರೆಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಇದು ಜನಪ್ರಿಯತೆಯನ್ನು ಗಳಿಸಿತು. ನಂತರ, ಅವರು ಕೊಂಕಣಿ ಧ್ವನಿಮುದ್ರಿಕೆಯಲ್ಲಿ ಪ್ರಸಿದ್ಧ ಬಾಲಿವುಡ್ ಗಾಯಕ ಹೇಮಂತ್ ಕುಮಾರ್ ಅವರೊಂದಿಗೂ ಹಾಡಿದರು. ಕೊಂಕಣಿಯಲ್ಲಿ ಬಂಗಾಳಿ ಗಾಯಕನೊಬ್ಬನ ಗಾಯನವನ್ನು ಒಳಗೊಂಡ ಅವರ ಜೂಲಿಯಾನಾ ಹಾಡು ಭಾರಿ ಜನಪ್ರಿಯವಾಯಿತು. ಹೆಲೆನ್ ಅವರ ಇತರ ಪ್ರಸಿದ್ಧ ಹಾಡುಗಳಲ್ಲಿ ಮೋಲ್ಬಾರ್ ಚಂದ್ರೇಮ್, ದರ್ಯಾಚಾ ಲಾರಾಂನಿಂ, ಕಾಳ್ಜಾಂತ್ ಉಲ್ಲಾಸ್ ಬೊರ್ಲಾ, ಘರಾಚೊ ದಿವೊ ಮತ್ತು ಸಾಂಜೆಚಾ ವೆಳಾರ್ ಸೇರಿವೆ