KARNATAKA
ಗ್ಯಾಸ್ ಗೀಸರ್ ಬಳಸುವಾಗ ಇರಲಿ ಎಚ್ಚರ: ಬೆಂಗಳೂರಲ್ಲಿ ಗ್ಯಾಸ್ ಲೀಕ್ ಆಗಿ ಗರ್ಭಿಣಿ ಮೃತ್ಯು, ಮಗು ಗಂಭೀರ..!
ಬೆಂಗಳೂರು: ಗ್ಯಾಸ್ ಗೀಸರ್ ಬಳಸುವಾಗ ಎಚ್ಚರಿಕೆ ಆತೀ ಅಗತ್ಯವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಗ್ಯಾಸ್ ಗೀಸರ್ ಆನ್ ಮಾಡಿ ಸ್ನಾನಕ್ಕೆ ಹೋದ ಮಹಿಳೆಯೋರ್ವಳು ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ.
ನಗರದ ಅಶ್ವತ್ ನಗರದಲ್ಲಿ ಈ ದುರ್ಘಟನೆ ನಡೆದಿದ್ದು ಮೃತ ಮಹಿಳೆಯನ್ನು ರಮ್ಯ(23) ಎಂದು ಗುರುತಿಸಲಾಗಿದೆ. ರಮ್ಯ ಅವರು ತಮ್ಮ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲು ಬಾತ್ ರೂಮಿಗೆ ಹೋಗಿದ್ದಾಗ ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಗೀಸರ್ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ರಮ್ಯ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.
ಕುಟುಂಬಸ್ಥರು ತಕ್ಷಣ ರಮ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ರಮ್ಯ ಮೃತಪಟ್ಟಿದ್ದಾರೆ. ಗರ್ಭಿಣಿಯಾಗಿದ್ದ ರಮ್ಯ ಅವರ ಮಗುವೂ ಪ್ರಪಂಚ ನೋಡುವ ಮುನ್ನವೇ ಗರ್ಭದಲ್ಲೇ ಮೃತಪಟ್ಟಿದೆ. ಇತ್ತ ರಮ್ಯ ಅವರ ನಾಲ್ಕು ವರ್ಷದ ಮಗು ಕೂಡ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.