DAKSHINA KANNADA
ಮೂಲಭೂತ ಅವಶ್ಯತೆ ಈಡೇರಿಕೆಗೆ ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಮುಂದೆ ಧರಣಿ
ಗುತ್ತಿಗಾರು, ಅಕ್ಟೋಬರ್ 28 :ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮಿಲ-ಮೊಗ್ರ-ಬಳ್ಳಕ್ಕ ಪ್ರದೇಶದ ಮೂಲಭೂತ ಸೌಲಭ್ಯ ಒದಗಿಸಲು ಒತ್ತಾಯಿಸಿ ಗುತ್ತಿಗಾರು ಗ್ರಾಮ ಪಂಚಾಯತ್ ಮುಂದೆ ನಾಗರಿಕ ಹೋರಾಟ ಕ್ರಿಯಾ ಸಮಿತಿ ಮೂಲಕ ಬುಧವಾರ ಧರಣಿ ನಡೆಯಿತು.
ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶವನ್ನು ಕೇಂದ್ರವಾಗಿರಿಸಿ ಕಮಿಲ, ಮೊಗ್ರ, ಬಳ್ಳಕ್ಕ ಪ್ರದೇಶದ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವು ವರ್ಷಗಳಿಂದ ಸೌಲಭ್ಯ ಒದಗಿಸಲು ಒತ್ತಾಯಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ಮೂಲಕ ಪಕ್ಷಾತೀತವಾಗಿ ಧರಣಿ ನಡೆಸಲಾಯಿತು.
ಸಭೆಯಲ್ಲಿ ಪ್ರಮುಖವಾಗಿ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಹಾಗೂ ಆರೋಗ್ಯ ಉಪಕೇಂದ್ರ ಮತ್ತು ಮತದಾನದ ಕೇಂದ್ರ ಸ್ಥಳಕ್ಕೆ ಸಂಪರ್ಕ ಕಲ್ಪಿಸಲು ತೊಂದರೆಯಾಗುತ್ತಿದೆ. ಮೊಗ್ರ ಹೊಳೆಗೆ ಸೇತುವೆ ರಚನೆಯ ಬೇಡಿಕೆ ಹಲವಾರು ವರ್ಷಗಳಿಂದ ಇದ್ದರೂ ಇದುವರೆಗೆ ಈಡೇರಿಕೆಯಾಗಿಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಶಾಲೆಯ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ತೆರಳಲು ಸಂಕಷ್ಟ ಪಡುತ್ತಿದ್ದಾರೆ. ಗ್ರಾಮ ಪಂಚಾಯತ್ ವತಿಯಿಂದ ತಾತ್ಕಾಲಿಕ ಕಾಲು ಸಂಕ ನಿರ್ಮಾಣ ಮಾಡುತ್ತಿದ್ದರೂ ಭಯದಿಂದಲೇ ದಾಟಬೇಕಾದ ಸ್ಥಿತಿ ಇದೆ. ಇದೂ ಅಲ್ಲದೆ ಏರಣಗುಡ್ಡೆ-ಮೊಗ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನೇಕ ಮನೆಗಳು ಇವೆ. ಹೊಳೆಯ ಎರಡೂ ಕಡೆ ಕಾಲನಿಗಳು ಇದೆ. ಒಟ್ಟು ಸುಮಾರು 150 ಮನೆಗಳಿಗೆ ಮಳೆಗಾಲಕ್ಕೆ ಈ ಸೇತುವೆ ಕಾರಣದಿಂದಲೇ ಸಂಪರ್ಕ ಕಷ್ಟವಾಗುತ್ತಿದೆ ಎಂಬ ಒತ್ತಾಯ ಕೇಳಿಬಂದಿದೆ.
ಅಲ್ಲದೆ ಗುತ್ತಿಗಾರು – ಕಮಿಲ – ಬಳ್ಪ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಡೀ ರಸ್ತೆ ಡಾಮರೀಕರಣ ಕಂಡಿಲ್ಲ. ಈಗ ವಾಹನ ಓಡಾಡಲು ತೀರಾ ಸಂಕಷ್ಟವಾಗಿದೆ.ಅನೇಕ ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಗ್ರಾಮದ ಜನರು ಸಹಿಸಿಕೊಂಡಿದ್ದಾರೆ. ಈಗ ಗುತ್ತಿಗಾರು-ಕಮಿಲ ಹಾಗೂ ಕಮಿಲ-ಬಳ್ಪ ರಸ್ತೆ ತೀರಾ ಹೊಂಡಗುಂಡಿಗಳಿಂದ ಕೂಡಿದ್ದು ವಾಹನ ಓಡಾಟವೇ ಕಷ್ಟ ಎನಿಸಿದೆ ಹೀಗಾಗಿ ತಕ್ಷಣವೇ ಸಂಪೂರ್ಣ ರಸ್ತೆ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು.
ಬಳ್ಳಕ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ, ನೀರಿನ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ, ಭರವಸೆಗಳು ಮಾತ್ರವೇ ಲಭ್ಯವಾಗಿದ್ದು ವ್ಯವಸ್ಥೆಯಾಗಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಧರಣಿಗೂ ಮುನ್ನ ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಗ್ರಾಮದ ಒಳಿತಿಗಾಗಿ ಪಕ್ಷಾತೀತವಾಗಿ ನಡೆಯುವ ಹಕ್ಕೊತ್ತಾಯಕ್ಕಾಗಿ ಪ್ರಾರ್ಥನೆ ನಡೆಸಲಾಯಿತು.
ಗುತ್ತಿಗಾರು ಗ್ರಾಮ ಪಂಚಾಯತ್ ಮುಂದೆ ನಡೆದ ಧರಣಿಯಲ್ಲಿ ನಾಗರಿಕ ಹೋರಾಟ ಕ್ರಿಯಾ ಸಮಿತಿ ಪ್ರಮುಖರಾದ ಮಹೇಶ್ ಪುಚ್ಚಪ್ಪಾಡಿ , ಸುಧಾಕರ ಮಲ್ಕಜೆ, ಗಂಗಾಧರ ಭಟ್ ಪುಚ್ಚಪ್ಪಾಡಿ, ಎಂ ಕೆ ಶಾರದಾ ಮುತ್ಲಾಜೆ, ಬಿಟ್ಟಿ ಬಿ ನೆಡುನೀಲಂ, ಕಾರ್ಯಪ್ಪ ಗೌಡ ಚಿಕ್ಮುಳಿ, ಲಕ್ಷ್ಮೀಶ ಗಬ್ಲಡ್ಕ, ಜೀವನ್ ಮಲ್ಕಜೆ, ಮೋನಪ್ಪ ಬಳ್ಳಕ್ಕ, ವಿಶ್ವನಾಥ ಕೇಂಬ್ರೋಳಿ, ರಘುವೀರ್ ಎಂ ಆರ್, ಅಚ್ಚುತ ಮಲ್ಕಜೆ, ವೆಂಕಟ್ರಮಣ ಕೇಂಬ್ರೋಳಿ, ವಸಂತ ಮಲ್ಕಜೆ ಮಾತನಾಡಿದರು.
ಧರಣಿ ಸ್ಥಳಕ್ಕೆ ಆಗಮಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ ಅವರು ಮನವಿ ಸ್ವೀಕರಿಸಿದರು. ಬಳಿಕ ಗುತ್ತಿಗಾರು ಕಮಿಲ ಬಳ್ಪ ರಸ್ತೆಗೆ ಅಭಿವೃದ್ಧಿ ಹಾಗೂ ಮೊಗ್ರ ಸೇತುವೆಯ ಇದುವರೆಗಿನ ಸ್ಥಿತಿಗತಿ ವಿವರಿಸಿದರು. ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.