LATEST NEWS
ಮೃತ ಬಶೀರ್ ಅವರ ಕುಟುಂಬಕ್ಕೆ ಜಿಲ್ಲಾಡಳಿತದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಮೃತ ಬಶೀರ್ ಅವರ ಕುಟುಂಬಕ್ಕೆ ಜಿಲ್ಲಾಡಳಿತದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಮಂಗಳೂರು ಜನವರಿ 7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಶೀರ್ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ 10 ಲಕ್ಷ ಪರಿಹಾರವನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿರುವ ಬಶೀರ್ ಮೃತದೇಹವನ್ನು ವೀಕ್ಷಿಸಿ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿ ಸರಕಾರದ ವತಿಯಿಂದ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಜನವರಿ 3ರಂದು ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಅಂತ್ಯ ಸಂಸ್ಕಾರ ಸಂಜೆ 4 ಗಂಟೆಗೆ ಪಂಜಿಮೊಗರು ಮಸೀದಿ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಶೀರ್ ಅವರ ಹಿರಿಯ ಮಗ ಇಮ್ರಾನ್ ತಂದೆಯ ಮಲೆ ಹಲ್ಲೆ ನಡೆದ ಸುದ್ದಿ ತಿಳಿದ ತಕ್ಷಣ ದುಬೈನಿಂದ ಮಂಗಳೂರಿಗೆ ಆಗಮಿಸಿದರು. ಆದರೆ ಕಿರಿಯ ಮಗ ಇರ್ಫಾನ್ ಅಬುದಾಬಿಯಲ್ಲಿ ಇದ್ದು ಅವರು ಬಂದ ನಂತರ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.
ಈ ನಡುವೆ ಶವಯಾತ್ರೆ ನಡೆಸದಂತೆ ಸ್ವತಃ ಕುಟುಂಬದವರೇ ವಿನಂತಿಸಿದ ಕಾರಣ ಭಾನುವಾರ ಮಧ್ಯಾಹ್ನ ಮೃತದೇಹವನ್ನು ನೇರವಾಗಿ ಬಶೀರ್ ಮನೆಗೆ ಕೊಂಡೊಯ್ಯಲಾಗುವುದು. ಅಲ್ಲಿ ಮಹಿಳೆಯರಿಗೆ ಮಾತ್ರ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಪಂಜಿಮೊಗರು ಮಸೀದಿ ಆವರಣಕ್ಕೆ ಮೃತದೇಹವನ್ನು ಕೊಂಡೊಯ್ದು ಅಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲುವ ಅವಕಾಶ ಕಲ್ಪಿಸಲಾಗಿದೆ.