BANTWAL
ಬಂಟ್ವಾಳ: ನೀರಿಲ್ಲದೆ ಬಿಯರ್ ಟಿನ್ ಒಳಗೆ ನುಗ್ಗಿದ ನಾಗರಹಾವು ರಕ್ಷಣೆ
ಬಂಟ್ವಾಳ, ಎಪ್ರಿಲ್ 03: ನೀರಿನ ಹುಡುಕಾಟದಲ್ಲಿ ಹಲವು ಬಾರಿ ಪ್ರಾಣಿ-ಪಕ್ಷಿಗಳು ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದ ಘಟನೆಗಳೂ ನಡೆದಿವೆ. ಹೀಗೆ ನೀರನ್ನು ಅರಸಿ ಹೊರಟಿದ್ದ ನಾಗರಹಾವೊಂದು ಯಾರೋ ಕುಡಿದು ರಸ್ತೆಗೆ ಎಸೆದಿದ್ದ ಬಿಯರ್ ಟಿನ್ ಒಳಗೆ ನೀರಿನ ಅಂಶವನ್ನು ಕಂಡು ಅದರೊಳಗೆ ತಲೆ ಹಾಕಿದೆ. ಆದರೆ ಹಾಕಿದ ತಲೆಯನ್ನು ಹಿಂದೆ ತೆಗೆಯಲಾಗದೆ ಪರದಾಡಬೇಕಾಗಿತ್ತು.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಕರಿಂಕದ ವಸಂತ ಗೌಡ ಎಂಬವರ ಮನೆ ಬಳಿ ಬಿಯರ್ ಟಿನ್ ಜೊತೆಗೆ ಸುತ್ತಾಡುತ್ತಿದ್ದ ನಾಗರಹಾವನ್ನು ನೋಡಿದ ವಸಂತ ಗೌಡರು ತಡ ಮಾಡದೆ ಪುತ್ತೂರಿನ ಉರಗಪ್ರೇಮಿ ಹಾಗು ಸಂರಕ್ಷಕ ತೇಜಸ್ ಅವರ ಗಮನಕ್ಕೆ ತಂದಿದ್ಧಾರೆ.
ತಕ್ಷಣವೇ ವಸಂತ ಗೌಡರ ಮನೆ ಬಳಿಗೆ ತೆರಳಿದ ತೇಜಸ್ ತಂಡ ಹರಸಾಹಸ ಪಟ್ಟು ಹಾವಿನ ತಲೆಯಿಂದ ಬಿಯರ್ ಟಿನ್ ಅನ್ನು ಹೊರ ತೆಗೆದಿದ್ದಾರೆ ಬಳಿಕ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ನೀರಿಲ್ಲದೆ ಪರದಾಡುವ ಪ್ರಾಣಿಗಳು ಹೆಚ್ಚಾಗಿ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ರಕ್ಷಣೆ ಸಿಗದೆ ಸಾವನ್ನಪ್ಲಿದ ಘಟನೆಗಳೂ ಸಾಕಷ್ಟು ನಡೆದಿದ್ದು,ಪ್ರಜ್ಞಾವಂತ ಜನ ಮೂಕ ಪ್ರಾಣಿಗಳಿಗೆ ಸಹಾಯ ಮಾಡದಿದ್ದರೂ ಪರವಾಗಿದ್ದ, ಆದರೆ ಉಪಯೋಗಿಸಿದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಮೂಕ ಪ್ರಾಣಿಗಳ ಜೀವಕ್ಕೆ ಕಂಟಕವಾಗಬಾರದು ಎನ್ನುವ ಒತ್ತಾಯ ಪ್ರಾಣಿ ಪ್ರಿಯರಿಂದ ಕೇಳಿ ಬರುತ್ತಿದೆ.