BANTWAL
‘ಅಯ್ಯೋ ದೇವರೇ ಒಮ್ಮೆ ಈ ರಸ್ತೆ ಕಾಮಗಾರಿ ಮುಗಿಸಿಬಿಡಪ್ಪ’..!
ಬಂಟ್ವಾಳ : ಬಿಸಿರೋಡು- ಅಡ್ಡಹೊಳೆವರೆಗೆ ಚತುಷ್ಪತ ಕಾಂಕ್ರೀಟ್ ರಸ್ತೆ ಕಾಮಗಾರಿ ಶುರುವಾದ ಬಳಿಕ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಕಾಡುತ್ತಿದ್ದು, ಪ್ರಯಾಣಿಕರು ಅಯ್ಯೋ ದೇವರೇ ಒಮ್ಮೆ ರಸ್ತೆ ಕಾಮಗಾರಿ ಮುಗಿಸಿಬಿಡಪ್ಪ ಎಂದು ಬೇಡುವ ಸ್ಥಿತಿ ಉಂಟಾಗಿದೆ.
ಅದರಲ್ಲೂ ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗಿರುವುದು ಕಲ್ಲಡ್ಕದಲ್ಲಿ. ಇಲ್ಲಿ ಪ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು,ಕಿರಿದಾದ ಅವ್ಯವಸ್ಥಿತ ಸರ್ವೀಸ್ ರಸ್ತೆ ನಿರ್ಮಾಣದ ಪರಿಣಾಮವಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಡ್ಯಾನ್ಸ್ ಮಾಡಿಕೊಂಡು ಸಂಚಾರ ಮಾಡಿದ ಪ್ರಯಾಣಿಕರಿಗೆ ಮಳೆ ಕಡಿಮೆಯಾದ ಬಳಿಕವಾದರೂ ರಸ್ತೆ ಸುಧಾರಣೆ ಕಾಣಬಹುದು ಅಂದುಕೊಂಡಿದ್ದರು.
ಆದರೆ ಮಳೆ ಕಡಿಮೆಯಾದರೂ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್. ಸಿ.ಕಂಪೆನಿ ಮಾತ್ರ ಸರ್ವೀಸ್ ರಸ್ತೆ ಗೆ ಡಾಮರು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ, ಇದರಿಂದ ಜನಸಾಮಾನ್ಯರಿಗೆ ಸಂಚಾರಕ್ಕೆ ತೊಂದರೆಯಾದರೆ , ವಾಹನಗಳ ಬಿಡಿಭಾಗಗಳನ್ನು ಕಳೆದುಕೊಂಡು ಮಾಲಕರು ನಷ್ಟ ಅನುಭವಿಸುವಂತಾಗಿದೆ.
ಮಳೆ ಕಡಿಮೆಯಾದ ಕೂಡಲೇ ಸರ್ವೀಸ್ ರಸ್ತೆಗೆ ಡಾಮರು ಹಾಕಿ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ ಮಾಡಿಕೊಡುತ್ತೇವೆ ಎಂದು ಇತ್ತೀಚಿಗೆ ಸಂಸದರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದ ಕಂಪೆನಿ ಈವಾಗ ಮಾತು ತಪ್ಪಿದೆ.
ಹೊಂಡಗುಂಡಿಗಳಿಂದ ತುಂಬಿರುವ ರಸ್ತೆಗೆ ನೀರು ಹಾಕುತ್ತಿರುವ ಕಂಪೆನಿ , ದೂಳಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಿದೆಯಾದರೂ, ಇವರು ಹಾಕುವ ನೀರಿನಿಂದ ರಸ್ತೆಯಲ್ಲಿ ಕೆಸರು ತುಂಬಿಕೊಂಡಿದೆ.
ಪ್ರತಿ ದಿನ ಕಲ್ಲಡ್ಕ ಭಾಗದಯ ವಾಹನಗಳು ಸಾಲು ಸಾಲಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುವ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಉಂಟಾಗುವ ಸಮಸ್ಯೆಯಿಂದ ಬೆಳಿಗ್ಗೆ ಮತ್ತು ಸಂಜೆ ಸಮಯಕ್ಕೆ ಸರಿಯಾಗಿ ಮನೆ ಹಾಗೂ ಕೆಲಸಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.