BANTWAL
ಬಂಟ್ವಾಳ : ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆಯಿಂದ ಧೂಳು- ಪಕ್ಷ, ಧರ್ಮ ಮರೆತು ಒಂದಾದ ಸಾರ್ವಜನಿಕರಿಂದ ಪ್ರತಿಭಟನೆ..!

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಕಲ್ಲಡ್ಕದಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ರಸ್ತೆ ಹದಗೆಟ್ಟು ಧೂಳಿನಿಂದ ಸಾರ್ವಜನಿಕರ ಮೇಲೆ ಗಂಭೀರ ಸಮಸ್ಯೆಗಳು ಉಂಟಾಗಿವೆ.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಕಲ್ಲಡ್ಕದಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ರಸ್ತೆ ಹದಗೆಟ್ಟು ಧೂಳಿನಿಂದ ಸಾರ್ವಜನಿಕರ ಮೇಲೆ ಗಂಭೀರ ಸಮಸ್ಯೆಗಳು ಉಂಟಾಗಿವೆ.

ಈ ಹಿನ್ನೆಲೆಯಲ್ಲಿ ರೋಸಿಹೋದ ಕಲ್ಲಡ್ಕದ ವರ್ತಕರು, ಸಾರ್ವಜನಿಕರು ಪಕ್ಷ, ಜಾತಿ, ಧರ್ಮ ಬೇಧ ಮರೆತು ಒಗ್ಗಟ್ಟಾಗಿ ಡಿಢೀರ್ ಪ್ರತಿಭಟನೆ ನಡೆಸಿ ಗುತ್ತಿಗೆ ಕಂಪನಿ ವಾಹನಗಳನ್ನು ತಡೆಗಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ಕಲ್ಲಡ್ಕದಲ್ಲಿ ರಸ್ತೆ ಛಿದ್ರಗೊಂಡಿದ್ದು, ಹೊಂಡ ಮುಚ್ಚಿ, ರಸ್ತೆಯನ್ನು ಸದೃಢವಾಗಿಸುವ ಕೆಲಸ ಆರಂಭಿಸಬೇಕು, ಧೂಳಿನ ಸಮಸ್ಯೆ ತಲೆದೋರಿದ್ದು, ಇದಕ್ಕೆ ಮುಕ್ತಿ ನೀಡಬೇಕು, ಡ್ರೈನೇಜ್ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಬುಧವಾರದೊಳಗೆ ಕಾಮಗಾರಿ ಆರಂಭಗೊಳ್ಳದೇ ಇದ್ದರೆ, ಕಲ್ಲಡ್ಕ ಪೇಟೆ ಬಂದ್, ಹೆದ್ದಾರಿ ತಡೆಯಂಥ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಮುಂದಿನ ಬುಧವಾರದೊಳಗೆ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಅಂತ್ಯಗೊಂಡಿತು.