BANTWAL
ಬಂಟ್ವಾಳ: ಶಂಕಿತ ರೇಬಿಸ್‌ಗೆ ಯುವಕ ಬಲಿ..!
ಬಂಟ್ವಾಳ, ಎಪ್ರಿಲ್ 03 : ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ಶಂಕಿತ ರೇಬಿಸ್‌ಗೆ ಯುವಕನೋರ್ವ ಬಲಿಯಾಗಿದ್ದಾನೆ.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿಯಾಗಿರುವ ಅಶೋಕ ಹೆಗ್ಡೆ ಎಂಬವರ ಪುತ್ರ 31ವರ್ಷದ ಪ್ರಶಾಂತ ಹೆಗ್ಡೆ ಮೃತ ಯುವಕನಾಗಿದ್ದಾನೆ. ಮೂರು ತಿಂಗಳ ಹಿಂದೆ ಪ್ರಶಾಂತ್ ಅವರಿಗೆ ಅವರ ಮನೆಯ ಸಾಕು ನಾಯಿ ಕಚ್ಚಿದ್ದು, ಬಳಿಕ ನಾಯಿ ಮೃತ ಪಟ್ಟಿತ್ತು. ಆದರೆ ಪ್ರಶಾಂತ್ ಅವರು ನಾಯಿ ಕಚ್ಚಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ.
ಬಳಿಕ ತೀವ್ರ ಸಂಕಟ, ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾರೆ. ಜ್ವರ ತಪಾಸಣೆ ನಡೆಸಿದ ಸಂದರ್ಭ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಮೃತಪಟ್ಟಿದ್ದಾರೆ.
ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು. ಆದರೆ ಅವರು ಯಾವ ಕಾರಣದಿಂದ ಮೃತರಾಗಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ತಿಳಿಸಿದ್ದಾರೆ.
ನಾಯಿ ಕಚ್ಚಿದ ಸಂದರ್ಭದಲ್ಲಿ ಹೆಚ್ಚಿನ ನಿಗಾ ವಹಿಸುವುದು, ತಕ್ಷಣ ಚಿಕಿತ್ಸೆ ಕೊಡಿಸುವುದು ಅಗತ್ಯ ಎಂದು ಅವರು ಎಚ್ಚರಿಸಿದ್ದಾರೆ. ಪ್ರಶಾಂತ್ ಅವರು ಇಬ್ಬರು ಪುತ್ರರಲ್ಲಿ ಹಿರಿಯವರಾಗಿದ್ದು, ಅವಿವಾಹಿತರಾಗಿದ್ದರು. ಜಿಯೋ ಸಂಸ್ಥೆಯಲ್ಲಿ ಒಪ್ಪಂದದ ಮೇರೆಗೆ ಉದ್ಯೋಗಿಯಾಗಿದ್ದು, ಮನೆಗೆ ಆಧಾರವಾಗಿದ್ದರು ಎಂದು ತಿಳಿದು ಬಂದಿದೆ.