BANTWAL
ಬಂಟ್ವಾಳ – ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ಅನುಮಾನಕ್ಕೆ ಆ*ತ್ಮ*ಹ*ತ್ಯೆಗೆ ಶರಣಾದ ದೈವದ ಪಾತ್ರಿ
ಬಂಟ್ವಾಳ ಜನವರಿ 24: ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಪೋಟೋಗೆ ಲೈಕ್ ಮಾಡಿದ್ದನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಪ್ರಶ್ನಿಸಿ ಗಲಾಟೆ ಮಾಡಿದ್ದಕ್ಕೆ ಮನನೊಂದು ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಎಂಬಲ್ಲಿ ನಡೆದಿದೆ.
ಮೃತರನ್ನು ಚೇತನ್ (25) ಎಂದು ಗುರುತಿಸಲಾಗಿದ್ದು, ಇವರು ದೈವದ ಪಾತ್ರಿಯಾಗಿ ಸೇವೆ ಮಾಡಿಕೊಂಡಿದ್ದರು. ಚೇತನ್ ಅವರಿಗೆ ಮಂಗಳೂರಿನ ಯುವತಿಯ ಜೊತೆ 8 ತಿಂಗಳ ಹಿಂದೆ ಮದುವೆ ನಿಶ್ಚಿತಾರ್ಥ ಆಗಿತ್ತು.
ಜನವರಿ 21ರಂದು ಬೆಳಗ್ಗೆ ಚೇತನ್ ಅವರ ತಾಯಿ ಹೊರಗೆ ಹೋಗಿದ್ದರು. ಈ ವೇಳೆ ಚೇತನ್ ನಿಶ್ಚಿತಾರ್ಥವಾಗಿದ್ದ ಯುವತಿ ಮನೆಗೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಆಕೆ ಚೇತನ್ ತಾಯಿ ಅವರಿಗೆ ಕರೆ ಮಾಡಿ ನಿಮ್ಮ ಮಗ ಮಲಗಿದ್ದಲ್ಲಿ ಎದ್ದೇಳುತ್ತಿಲ್ಲ ಕೂಡಲೇ ಮನೆ ಬನ್ನಿ ಎಂದು ತಿಳಿಸಿದ್ದಾಳೆ.
ಚೇತನ್ ತಾಯಿ ಮನೆಗೆ ಬಂದು ನೋಡಿದಾಗ ಚೇತನ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ, ಅಲ್ಲದೆ ಮನೆಯ ಛಾವಣಿಗೆ ಲುಂಗಿ ಒಂದು ನೇಣಿ ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿತ್ತು, ಅವರು ಯುವತಿಯನ್ನು ಪ್ರಶ್ನಿಸಿದ ವೇಳೆ ಚೇತನ್ ಇನ್‌ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ತಾನು ಮನೆಗೆ ಬಂದಿದ್ದೆ, ಈ ವೇಳೆ ನಮ್ಮಿಬ್ಬರ ನಡುವೆ ಗಲಾಟೆ ಆಗಿದೆ ಎಂದಿದ್ದಾಳೆ. ಅಲ್ಲದೆ ಗಲಾಟೆ ವೇಳೆ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಾನೇ ಕೆಳಗಿಳಿಸಿ ಆರೈಕೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.