BANTWAL
ಬಂಟ್ವಾಳ – ಸ್ಕೂಟರ್ ಗೆ ಲಾರಿ ಡಿಕ್ಕಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಸಾವು

ಬಂಟ್ವಾಳ ಜೂನ್ 30: ಸ್ಕೂಟರ್ ಗೆ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ನಡೆದಿದೆ, ಮೃತರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೃಷಿ ಮೇಲ್ವಿಚಾರಕರಾಗಿರುವ ಚಿದಾನಂದ (50) ಎಂದು ಗುರುತಿಸಲಾಗಿದೆ.
ಬಿ.ಸಿ.ರೋಡಿನಿಂದ ಮಂಗಳೂರು ಹೆದ್ದಾರಿಯಲ್ಲಿರುವ ಅಜ್ಜಿಬೆಟ್ಟು ಕ್ರಾಸ್ನ ಬಳಿ ಸ್ಕೂಟರ್ನಲ್ಲಿ ಸಾಗುತ್ತಿದ್ದ ಅವರಿಗೆ ಹಿಂದಿನಿಂದ ಅದೇ ಮಾರ್ಗವಾಗಿ ಬಂದ ಟ್ಯಾಂಕರ್ ಗುದ್ದಿದ್ದು, ಸ್ಕೂಟರ್‌ಸಹಿತ ಚಿದಾನಂದ ಅವರು ಟ್ಯಾಂಕರ್ ಅಡಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಇದಕ್ಕೂ ಮುನ್ನವೇ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಎರಡು ದಶಕಗಳಿಗೂ ಮಿಕ್ಕಿ ಸೇವಾನುಭವ ಹೊಂದಿದ್ದ ಚಿದಾನಂದ ಅವರು, ಬಂಟ್ವಾಳ ತಾಲೂಕಿನಲ್ಲಿ ಸೇವಾನಿರತರಾಗಿ ಕರ್ತವ್ಯ ಆರಂಭಿಸಿದ್ದರು. ಬಳಿಕ ಯೋಜನೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಅವರು, ಚಿಕ್ಕಮಗಳೂರು, ಚಾಮರಾಜನಗರ, ವಿಟ್ಲಸಹಿತ ಹಲವೆಡೆ ಕರ್ತವ್ಯ ಸಲ್ಲಿಸಿದ್ದರು. ಇತ್ತೀಚೆಗೆ ಚಿಕ್ಕಹುಣಸೂರಿಗೆ ಕೃಷಿ ಮೇಲ್ವಿಚಾರಕರಾಗಿ ವರ್ಗ ಹೊಂದಿದ್ದರು.