BANTWAL
ಬಂಟ್ವಾಳ – ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹುತಿ – ಕೊಟ್ಯಾಂತರ ನಷ್ಟ

ಬಂಟ್ವಾಳ ಮಾರ್ಚ್ 09: ತೆಂಗಿನ ಎಣ್ಣೆ ಮಿಲ್ ಅಗ್ನಿಗಾಹಿತಿಯಾದ ಘಟನೆ ಬಂಟ್ವಾಳ – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.

ಕಾವಳಪಡೂರು ಗ್ರಾಮದ ಬಾಂಬಿಲ ನಿವಾಸಿ ಜಯರಾಮ ಗೌಡ ಎಂಬವರ ಮಾಲಕತ್ವದ ‘ಐ ಗ್ರೋ ಇನ್ ಕಾರ್ಪ್’ ಎಂಬವರಿಗೆ ಸೇರಿದ್ದ ಮಿಲ್ ಇದಾಗಿದ್ದು, ಶನಿವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಮಿಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಮಿಲ್ ಸಮೀಪವೇ ಜಯರಾಮ ಅವರ ಮನೆಯಿದ್ದು, ಬೆಂಕಿ ಅವಘಡ ತಕ್ಷಣ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಥಳೀಯರನ್ನು ಹಾಗೂ ಅಗ್ನಿಶಾಮಕ ದಳವನ್ನು ಕರೆಸಿದ್ದರು. ಬಂಟ್ವಾಳ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಅದಾಗಲೇ ಮಿಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮಿಲ್ ನಲ್ಲಿ ಸುಮಾರು 12 ಟನ್ ಗಳಷ್ಟು ತೆಂಗಿನಎಣ್ಣೆ ಹಾಗೂ ಕಚ್ಚಾ ತೆಂಗಿನಕಾಯಿ, ಮೆಷಿನರಿಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಸುಮಾರು ಮೂರು ಕೋಟಿ ರೂ.ನಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಜಯರಾಮ ತಿಳಿಸಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.