ಹಿರಿಯ ನಾಗರಿಕ ನಿವೃತ್ತ ಸೈನಿಕರಾಗಿದ್ದ ಬಂಟ್ವಾಳದ ಅಂಬ್ರೋಸ್ ಡಿಸೋಜ ಬಿ.ಸಿ.ರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲ ಹೊತ್ತಿನಲ್ಲೇ ಅವರ ಹಣದ ಬ್ಯಾಗ್ ನ್ನು ಬಿಸಿರೋಡಿನಲ್ಲಿರುವ ಸ್ಟೇಟ್ ಬ್ಯಾಂಕಿನೊಳಗಿಂದಲೇ ಕಳವು ಗೈಯ್ಯಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಅಂಬ್ರೋಸ್ ಡಿಸೋಜಾ ಅವರು ದೂರು ನೀಡಿದ್ದಾರೆ. ಒಟ್ಟು ರೂ.1,30,000 ನಗದು ಇತ್ತೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ತಮ್ಮ ಖಾತೆಯಿಂದ ಡ್ರಾ ಮಾಡುತ್ತಿದ್ದರು. ಸಮುದಾಯದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಸೆ.4 ರಂದು ಒಟ್ಟು 50 ಸಾವಿರ ಹಣವನ್ನು ಬ್ಯಾಗ್ ಒಂದರಲ್ಲಿ ಇರಿಸಿಕೊಂಡು ಬಿಸಿರೋಡಿನ ಬ್ಯಾಂಕಿಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್ ನಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು. ಅಲ್ಲಿ ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಅಲ್ಲಿರದೆ ಕಾಣೆಯಾಗಿತ್ತು. ಇದೀಗ ಪಾಸ್ ಬುಕ್ ಹಾಗೂ ದಾಖಲೆಗಳಿದ್ದ ಕಳವಾದ ಬ್ಯಾಗ್ ಬಿಸಿರೋಡು ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದೆ. ಕಳವು ಆಗಿರುವ ಹಣವನ್ನು ಮತ್ತು ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ಅಂಬ್ರೋಸ್ ಅವರು ನಗರ ಪೋಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದಾರೆ.