LATEST NEWS
ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಆರ್ಥಿಕ ಹಗರಣ – ಮುತ್ತಿಗೆ ಹಾಕಿದ ಸಂತ್ರಸ್ತರು…!!

ಉಡುಪಿ ಡಿಸೆಂಬರ್ 19: ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದು, ಸುಮಾರು 100 ಕೋಟಿಗೂ ಮಿಕ್ಕಿ ಸೊಸೈಟಿಯಿಂದ ವಂಚನೆ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಹಕಾರಿ ಬ್ಯಾಂಕ್ ಕಚೇರಿಗೆ ಸಂತ್ರಸ್ತರು ಮುತ್ತಿಗೆ ಹಾಕಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಡುಪಿ ಕಮಾಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಾವಿರಾರು ಜನರು ಠೇವಣಿ ಹಣವನ್ನು ಇಟ್ಟಿದ್ದು, ಜೂನ್ ತಿಂಗಳಿಂದ ಗ್ರಾಹಕರಿಗೆ ಸೊಸೈಟಿ ಯಾವುದೇ ಬಡ್ಡಿಯನ್ನು ನೀಡದೆ ಸತಾಯಿಸುತ್ತಿದ್ದು, ಇದೀಗ ಹಣಕ್ಕಾಗಿ ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕಿದ್ದಾರೆ. ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿರದಿಂದ ಕೋಟ್ಯಾಂತರ ರೂಪಾಯಿವರೆಗೂ ಗ್ರಾಹಕರು ಠೇವಣಿ ಇಟ್ಟಿದ್ದಾರೆ. ಉಡುಪಿ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
