KARNATAKA
ಲಗೇಜ್ ಹುಡುಕಲು ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಟೆಕ್ಕಿ
ಬೆಂಗಳೂರು, ಮಾರ್ಚ್ 31: ಮೆಟ್ರೋ ನಗರದಲ್ಲಿನ ಉದ್ಯಮಿಗಳು, ಉದ್ಯೋಗಿಗಳು ಹಾಗೂ ವಿವಿಧ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ.
ಪ್ರಯಾಣದ ವೇಳೆ ಕೆಲವೊಮ್ಮೆ ಸಣ್ಣಪುಟ್ಟ ಗೊಂದಲಗಳಿಂದ ತಮ್ಮ ವಸ್ತುಗಳು ಮಿಸ್ ಆಗಿಬಿಡುತ್ತದೆ. ಕೆಲವರು ಬದಲಾದ ವಸ್ತುವನ್ನು ಹುಡುಕಲು ವಾರಗಟ್ಟಲೇ ಸಮಯ ಕಾಯುತ್ತಾರೆ. ಇನ್ನೂ ಕೆಲವರು ಹೋಗಿದ್ದು ಹೋಯ್ತೆಂದು ಸುಮ್ಮನಾಗುತ್ತಾರೆ. ಆದರೆ ಕನ್ವೇಯರ್ ಬೆಲ್ಟ್‌ನಲ್ಲಿ ಲಗೇಜ್‌ಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ.
ಅದಕ್ಕೆ ವಿಮಾನಯಾನ ಸಂಸ್ಥೆಗಳೂ ಅಷ್ಟಾಗಿ ಸಹಾಯ ನೀಡುವುದಿಲ್ಲ. ಹೀಗೆಂದು ಬೆಂಗಳೂರಿನ ಯುವಕನೊಬ್ಬ ಇಂಡಿಗೋ ಏರ್‌ಲೈನ್ಸ್ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ತನ್ನ ಕಳೆದುಹೋದ ವಸ್ತುಗಳನ್ನು ಸ್ವಪ್ರಯತ್ನದಿಂದ ಪಡೆಯುವ ಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ಸೂ ಕಂಡಿದ್ದಾರೆ.
ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ನಾದನ್ ಕುಮಾರ್ ಅವರ ವಸ್ತುಗಳು ಸಹ ಪ್ರಯಾಣಿಕರೊಬ್ಬರಿಗೆ ಬದಲಾಗಿತ್ತು. ಇದು ಕುಮಾರ್ ಅವರ ಕೌಶಲವನ್ನು ಉತ್ತಮವಾಗಿ ಬಳಸಿಕೊಳ್ಳುವುದಕ್ಕೆ ಪ್ರೇರೇಪಿಸಿತು. ಏರ್‌ಲೈನ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವ ಮೂಲಕ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುವುದಕ್ಕೂ ಸಾಧ್ಯವಾಯಿತು.
ಈ ಕುರಿತು ಟ್ವೀಟ್ ಸಹ ಮಾಡಿರುವ ಕುಮಾರ್, ಇಂಡಿಗೋ ಏರ್‌ಲೈನ್‌ನ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳಿಂದಾಗಿ ತಮ್ಮ ಲಗೇಜ್ ಅನ್ನು ಹೇಗೆ ಹಿಂಪಡೆದರು ಎಂಬ ಇಂಟರೆಸ್ಟಿಂಗ್ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ.
ನಾನು ನಿನ್ನೆ ಇಂಡಿಗೋ (SIC) 6E-185 ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಈ ವೇಳೆ ನನ್ನ ಲಗೇಜ್ ಬ್ಯಾಗ್ ಹಾಗೂ ಸಹ ಪ್ರಯಾಣಿಕರೊಬ್ಬರ ಲಗೇಜ್‌ಬ್ಯಾಗ್ ಒಂದೇ ರೀತಿಯಲ್ಲಿ ಬಣ್ಣ ಹೋಲುವುದಾಗಿದ್ದರಿಂದ ಅದಲು ಬದಲಾಗಿಬಿಟ್ಟಿತು. ಅದನ್ನು ಮರಳಿ ಪಡೆಯುವ ಸಲುವಾಗಿ ಗ್ರಾಹಕಸೇವಾ ಸಂಖ್ಯೆಗೆ ಕರೆ ಮಾಡಿ, ಲಗೇಜ್ ಅನ್ನು ಪತ್ತಹಚ್ಚಲು ಸಾಧ್ಯವಾಗುವ ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಿದೆ. ಆದರೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ.
ಗ್ರಾಹಕಸೇವಾ ತಂಡವು ಗೌಪ್ಯತೆ ಮತ್ತು ಮಾಹಿತಿ ಭದ್ರತಾ ದೃಷ್ಟಿಯಿಂದ ವ್ಯಕ್ತಿಯ ಸಂಪರ್ಕವನ್ನೂ ಸಹ ನನಗೆ ತಿಳಿಸಲಿಲ್ಲ. ಮರುದಿನ ಕರೆ ಮಾಡಿದರೂ ಗ್ರಾಹಕ ಸೇವಾ ಏಜೆಂಟ್ ನನ್ನ ಕರೆಗಳನ್ನು ಸ್ವೀಕರಿಸಲೇ ಇಲ್ಲ. ಎಷ್ಟೇ ಪ್ರಯತ್ನಿಸಿದರೂ ಲಗೇಜ್ ಸಹ ಪ್ರಯಾಣಿಕನನ್ನು ಪತ್ತೆಹಚ್ಚುವ ಎಲ್ಲ ಕಾರ್ಯಗಳು ವಿಫಲಗೊಂಡವು ಎಂದು ಹೇಳಿದ್ದಾರೆ.
https://twitter.com/_sirius93_/status/1508423479594733568?ref_src=twsrc%5Etfw%7Ctwcamp%5Etweetembed%7Ctwterm%5E1508423479594733568%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fbengaluru-man-hacks-indigo-website-to-find-his-lost-luggage-know-what-happens-next%2F
ನಂತರ ನಾನು ಸ್ವ ಪ್ರಯತ್ನದಿಂದಲೇ ಸಹ ಪ್ರಯಾಣಿಕನನ್ನು ಪತ್ತೆಹಚ್ಚಲು ಮುಂದಾದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರಿಂದ ಹ್ಯಾಕಿಂಗ್ ವಿಧಾನವನ್ನು ಬಳಸಿಕೊಂಡೆ. @INDIGO-6E ವೆಬ್‌ಸೈಟ್‌ನಲ್ಲಿ ಡೆವಲಪರ್ ಕನ್ಸೋಲ್ ಅನ್ನು ತೆರೆದು ನೆಟ್‌ವರ್ಕ್ ಲಾಗ್ ರೆಕಾರ್ಡ್ ಆನ್(SIC) ನಲ್ಲಿ ಸಂಪೂರ್ಣ ಚೆಕ್-ಇನ್ ಫ್ಲೋ ಪ್ರಾರಂಭಿಸಿದೆ. ಇದೇ ವೇಳೆ ಡೆವಲಪರ್ ಪರಿಕರಗಳ ಮೂಲಕ ಸಹ-ಪ್ರಯಾಣಿಕನನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದೆ. ನನ್ನ ಬ್ಯಾಗ್ ಸಹ ಮರಳಿ ಪಡೆದುಕೊಂಡೆ ಎಂದು ವಿವರಿಸಿದ್ದಾರೆ.
ಇದಾದ ನಂತರ ತಮ್ಮ ಗ್ರಾಹಕ ಸೇವೆಯನ್ನು ಸುಧಾರಿಸುವಂತೆ ಇಂಡಿಗೋಗೆ ಸಲಹೆಗಳನ್ನು ನೀಡಿದ್ದಾರೆ. ನಂದನ್ ಅವರ ಸನ್ನಿವೇಶ ಗಮನಿಸಿದ ಇಂಡಿಗೋ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ.