LATEST NEWS
ಸಂಘಪರಿವಾರದ ಕಾರ್ಯಕರ್ತರ ಮೇಲೆ ಪೊಲೀಸ್ ದರ್ಪ – ಬಜ್ಪೆ ಇನ್‌ಸ್ಪೆಕ್ಟರ್, ಮೂವರು ಸಿಬ್ಬಂದಿ ಅಮಾನತು
ಮಂಗಳೂರು ಎಪ್ರಿಲ್ 26: ವಿಚಾರಣೆಗೆಂದು ಠಾಣೆಗೆ ಕರೆಸಿ ಮೂವರು ಯುವಕರ ಹಲ್ಲೆ ನಡೆಸಿದ ಆರೋಪದ ಮೇಲೆ ಬಜ್ಪೆ ಠಾಣೆ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ.ಮತ್ತು ಮೂವರು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇವೆಯಿಂದ ಸೋಮವಾರ ಅಮಾನತು ಮಾಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಮತ್ತು ಸಿಬ್ಬಂದಿಗಳಾದ ಸಯ್ಯದ್ ಇಮ್ತಿಯಾಸ್, ಪ್ರವೀಣ್, ಸುನೀಲ್ ಸಸ್ಪೆಂಡ್ ಆಗಿದ್ದಾರೆ.
ಘಟನೆಗೆ ಸಂಬಂಧಿಸಿ ಉತ್ತರ ಎಸಿಪಿ ಮಹೇಶ್ ಕುಮಾರ್ ವಿಚಾರಣೆ ನಡೆಸಿದಾಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲಾಖಾ ಶಿಸ್ತು ಕ್ರಮ ಮತ್ತು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ.
ಕಟೀಲು ದೇವಸ್ಥಾನ ವ್ಯಾಪ್ತಿಯ ಕೆಲವು ಅಂಗಡಿಗಳನ್ನು ಎಸಿ ಮದನ್ ಮೋಹನ್ ಈ ಹಿಂದೆಯೇ ತೆರವು ಮಾಡಿ ಆದೇಶ ಹೊರಡಿಸಿದ್ದರು. ಆದರೂ ಅಂಗಡಿಗಳು ತೆರೆದು ಕಾರ್ಯಾಚರಿಸಲಾಗುತ್ತಿತ್ತು. ಅದರಲ್ಲಿ ಒಂದು ಅಂಗಡಿಗೆ ಮೂಡುಬಿದಿರೆ ನಿವಾಸಿಯೊಬ್ಬರು ಬೆಳಗ್ಗೆ ಮತ್ತು ಸಾಯಂಕಾಲ ಎಳನೀರು ತಂದು ಹಾಕುತ್ತಿದ್ದರು.
ಶುಕ್ರವಾರ ಅಲ್ಲಿದ್ದ ಮಹೇಶ್, ದುರ್ಗಾಚರಣ್ ಮತ್ತು ದಿನೇಶ್ ಎಂಬುವರು ಅಂಗಡಿ ಮುಚ್ಚಲಾಗಿದೆ, ಇಲ್ಲಿ ಹಾಕುವಂತಿಲ್ಲ ಎಂದು ಹೇಳಿದ್ದರು. ಅದಕ್ಕೆ ಅವರು ತನಗೆ ಎಳನೀರು ಅನ್‌ಲೋಡ್ ಮಾಡಲು ಅಡ್ಡಿ ಮಾಡಿದ್ದಾರೆ ಎಂದು ಇನ್‌ಸ್ಪೆಕ್ಟರ್‌ಗೆ ಮಾಹಿತಿ ನೀಡಿದ್ದರು. ಶನಿವಾರ ಸಾಯಂಕಾಲ ಇನ್‌ಸ್ಪೆಕ್ಟರ್ ಮೂವರನ್ನೂ ಠಾಣೆಗೆ ಕರೆಸಿ, ವಿಚಾರಣೆ ಸಂದರ್ಭ ಯುವಕರು ಉತ್ತರ ಕೊಡದೆ ಅನುಚಿತವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹೊಡೆದಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಲೋಪ ಕಂಡು ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.