LATEST NEWS
ಬಜ್ಪೆ – 16 ಸಿಸಿಟಿವಿ ಇದ್ದರೂ ಮನೆಯಿಂದ 1 ಕೆಜಿಗೂ ಅಧಿಕ ಚಿನ್ನಾಭರಣ ಕಳ್ಳತನ

ಬಜ್ಪೆ ಎಪ್ರಿಲ್ 02: ಮನೆಯಲ್ಲಿ 16 ಸಿಸಿಟಿವಿ ಕ್ಯಾಮರಾ ಇದ್ದು ಕ್ಯಾಮರಾ ಇಲ್ಲದ ಕಡೆಯಿಂದ ಮನೆಗೆ ನುಗ್ಗಿ ಮನೆಯಲ್ಲಿದ್ದ ಒಂದು ಕೆಜಿಗೂ ಅಧಿಕ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಮಂಗಳವಾರ ವರದಿಯಾಗಿದೆ.
ಪೆರ್ಮುದೆ ನಿವಾಸಿ ಪ್ರವೀಣ್ ಪಿಂಟೊ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ ಎಂದು ತಿಳಿದು ಬಂದಿದ್ದು, ಕಳ್ಳರು ಸುಮಾರು 1.080ಕೆಜಿಯ ಸುಮಾರು 80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ. ಪೆರ್ಮುದೆಯ ಜಾನ್ವಿನ್ ಪಿಂಟೋ ಅವರ ಮನೆಯಿಂದ ಈ ಕಳ್ಳತನ ನಡೆದಿದೆ. ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ಕುವೈಟ್‌ನಲ್ಲಿದ್ದಾರೆ. ಮನೆಯಲ್ಲಿ ಯಾರೂ ಇರಲಿಲ್ಲ. ಇವರ ಮನೆಯ ಸುತ್ತ 16 ಸಿಸಿ ಕೆಮರಾ ಇದ್ದರೂ, ಕೆಮರಾ ಇಲ್ಲದ ಕಡೆಯಿಂದ ಬಂದು ಕೆಮರಾದ ದಿಕ್ಕನ್ನು ಬದಲಿಸಿ ಕಿಟಿಕಿಯ ಕಬ್ಬಿಣದ ರಾಡ್ ಅನ್ನು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದರು.
ಮಾರ್ಚ್ 31ರ ರಾತ್ರಿಯಿಂದ ಎಪ್ರಿಲ್ 1ರ ಬೆಳಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯ ಕೋಣೆಯೊಂದರ ಕಬ್ಬಣದ ಸರಳುಗಳನ್ನು ತುಂಡರಿಸಿ ಒಳಹೊಕ್ಕ ಕಳ್ಳರು ಕೊಣೆಯಲ್ಲಿದ್ದ ಬೀರುವನ್ನು ಒಡೆದು ವಿವಿಧ ಆಭರಣಗಳನ್ನು ಕಳವು ಗೈದಿದ್ದಾರೆ ಎಂದು ತಿಳಿದು ಬಂದಿದೆ.

ಈ ಮನೆಯಲ್ಲಿ ಮುಧೋಳ, ಜರ್ಮನ್ ಶೆಫರ್ಡ್ ಸೇರಿದಂತೆ 8 ಸಾಕು ನಾಯಿಗಳಿವೆ. ಇವುಗಳ ಕಣ್ತಪ್ಪಿಸಿ ಕೃತ್ಯವೆಸಗಿದ್ದಾರೆ. ಲಾಕರ್‌ನಲ್ಲಿದ್ದ ಅಪಾರ ಚಿನ್ನಾಭರಣ, ವಾಚ್‌ಗಳನ್ನು ಕಳವು ಮಾಡಿದ್ದಾರೆ. ಲಾಕರ್ ಕೀಯನ್ನು ಬಳಸಿ ಅದನ್ನು ತೆರೆದಿರುವುದು ಕಂಡುಬಂದಿದೆ. ಪ್ರತೀದಿನ ಮನೆಯ ನಾಯಿಗಳಿಗೆ ಆಹಾರ ಹಾಕಲು ಇಬ್ಬರು ಕೆಲಸದಾಳುಗಳು ಬರುತ್ತಿದ್ದರು. ಎಂದಿನಂತೆ ಅವರು ಬೆಳಗ್ಗೆ ನಾಯಿಗಳಿಗೆ ಆಹಾರ ಹಾಕಲು ಬಂದಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಅವರು ಕುವೈಟ್‌ನಲ್ಲಿರುವ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.