DAKSHINA KANNADA
ಒಡಿಶಾದ ಮುಸ್ಲಿಂ ಯುವಕನ ಮೇಲೆ ದೈವದ ಆವೇಶ – ಖಾಸಗಿ ಕಂಪೆನಿ ಮಾಡಿದ ಆ ಒಂದು ತಪ್ಪು ತಂದ ಸಂಕಷ್ಟ….!!
ಮಂಗಳೂರು ಅಕ್ಟೋಬರ್ 01: ತುಳುನಾಡಿನಲ್ಲಿ ದೈವಾರಾಧನೆಗೆ ಅತೀ ಹೆಚ್ಚು ಮಹತ್ವ. ಇಲ್ಲಿನ ಜನ ದೈನದ ನುಡಿಗಳನ್ನು ಮೀರುವುದಿಲ್ಲ. ಪ್ರತಿವರ್ಷವೂ ದೈವರಾಧನೆಯನ್ನು ಚಾಚೂ ತಪ್ಪದೆ ಪಾಲಿಕೊಂಡು ಬರುತ್ತಾರೆ. ಯಾವುದೇ ಕುಟುಂಬ ತಾನು ನಂಬಿದ ದೈವದ ಆರಾಧನೆಯನ್ನು ಮರೆತರೆ, ಯಾವುದೋ ಒಂದು ರೂಪದಲ್ಲಿ ದೈವ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತದೆ. ಇದೇ ರೀತಿಯ ಒಂದು ಘಟನೆ ಇದೀಗ ಮಂಗಳೂರಿನ ಬಜ್ಪೆ ಸಮೀಪ ನಡೆದಿದ್ದು, ಖಾಸಗಿ ಕಂಪೆನಿಯೊಂದು ಭೂಸ್ವಾಧೀನದ ವೇಳೆ ದೈವಾರಾಧನೆಯ ಕೇಂದ್ರವನ್ನು ಸ್ವಾಧೀನಕ್ಕೆ ಪಡೆದುಕೊಂಡು ಪುನರ್ವತಿ ಮಾಡಿತ್ತು, ಆದರೆ ಇದೀಗ ದೈವ ತನ್ನ ಇರುವಿಕೆಯನ್ನು ತೋರಿಸಿಕೊಟ್ಟಿದೆ.
ಬಜ್ಪೆಯ ಸಮೀಪದ ಪೆರ್ಮುದೆಯಲ್ಲಿ ಚಾಮುಂಡಿ ದೈವಸ್ಥಾನದಲ್ಲಿ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ವೇಳೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಡಿಶಾ ಮೂಲದ ಮುಸ್ಲಿಂ ಯುವಕನ ಮೈಯಲ್ಲಿ ದೈವ ಆವೇಶವಾಗಿದೆ. ಈ ಬಗ್ಗೆ ಪ್ರಶ್ನಾಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಠಿತ ಕಂಪನಿಯೊಂದರಿಂದ ಉಂಟಾದ ಸಮಸ್ಯೆ ಎಂದು ಕಂಡುಬಂದಿದೆ. ಮೂರು ದಶಕಗಳ ಹಿಂದೆ ಪ್ರತಿಷ್ಠಿತ ಕಂಪೆನಿ ತನ್ನ ಪ್ಯಾಕ್ಟರಿಗಾಗಿ ಬಜ್ಪೆ ಸಮೀಪದ ಭೂಸ್ವಾಧೀನ ಮಾಡಿಕೊಂಡಿತ್ತು. ಅಲ್ಲಿ ಇದ್ದ ಎಲ್ಲ ಜನರಿಗೆ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ ಅಲ್ಲಿನವರು ನಂಬಿಕೊಂಡು ಬಂದಿದ್ದ ದೈವ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನವನ್ನು ಕೂಡ ಪುನರ್ವಸತಿ ಹೆಸರಲ್ಲಿ ಸ್ಥಳಾಂತರ ಮಾಡಲಾಗಿತ್ತು, ಆದರೆ ಸಮಸ್ಯೆ ಅಲ್ಲಿಂದಲೇ ಪ್ರಾರಂಭವಾಗಿದೆ.
ದೈವ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್‌ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುಸ್ಥಳವಾಗಿದೆ. ಇಲ್ಲಿ ನೇಮ ಮುಂದುವರಿಸುವುದು ನಡೆಸುವುದು ಕಷ್ಟವಾಗಿತ್ತು. ಇಲ್ಲಿನ ಭೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಸೌಕರ್ಯಗಳ ಕೊರತೆಯೂ ಇಲ್ಲಿ ನೇಮೋತ್ಸವ ಮಾಡುವುದಕ್ಕೆ ತೊಂದರೆ ಉಂಟು ಮಾಡತೊಡಗಿತು. ನೇಮ ಸ್ಥಗಿತಗೊಂಡ ನಂತರ ಗ್ರಾಮ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ಕಂಡುಬರಲು ಪ್ರಾರಂಭವಾಯಿತು. ಪಿಲಿಚಾಮುಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್‌ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಯಥಾಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬುದು ದೈವದ ನುಡಿಯಾಗಿತ್ತು.
ಚಾಮುಂಡಿ ದೈವಸ್ಥಾನ ನಿರ್ಮಾಣ ಎರಡು ತಿಂಗಳ ಹಿಂದೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಒಡಿಶಾ ಮೂಲದ ಮುಸ್ಲಿಂ ಯುವಕನ ಮೇಲೆ ದೈವ ಆವೇಶ ಬಂದಿದೆ. ಈ ಬಗ್ಗೆ ಪೆರ್ಮುದೆ ಸೋಮನಾಥೇಶ್ವರ ದೇಗುಲದಲ್ಲಿ ಪ್ರಶ್ನಾಚಿಂತನೆ ಇರಿಸಿದಾಗಲೂ ಕಂಪನಿ ಸಮೀಪದ ಗಡುಪಾಡಿನಲ್ಲಿ ನೇಮೋತ್ಸವ ನಿಂತ ಕಾರಣ ಇಂಥ ಪ್ರಕರಣಗಳು ನಡೆಯುತ್ತಿವೆ ಎಂದು ಕಂಡುಬಂದಿದೆ. ಇದರ ಬಗ್ಗೆ ಗ್ರಾಮಸ್ಥರು ಸಮಾಲೋಚನೆ ನಡೆಸಿ ದೈವ ಸಾನ್ನಿಧ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವ ಮೂಲಕ ದೈವದ ನುಡಿಯ ಬಗ್ಗೆ ಸಂಕಲ್ಪ ಮಾಡಲಾಯಿತು.
ದೈವಾರಾಧನೆಯ ಮೂಲ ಸ್ವರೂಪ ಕಳೆದುಕೊಂಡ ಕಾರಣ ಸ್ಥಳೀಯ ಕೈಗಾರಿಕೆಗಳಲ್ಲಿ ಹಲವು ದೋಷ ಕಂಡುಬಂದಿದ್ದು, ಪರಿಹಾರ ಪ್ರಾಯಶ್ಚಿತಕ್ಕಾಗಿ ಕಂಪನಿಯವರು ಕಂಪನಿ ಒಳಗೆ ಚಾಮುಂಡಿ ದೇವಸ್ಥಾನ ನಿರ್ಮಿಸಿ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆ ಮಾಡುತ್ತಿದ್ದಾರೆ. ಇದೀಗ ಸಮಸ್ಯೆ ಬಗೆಹರಿಯಬೇಕೆಂದರೆ ಕಾಯರ್‌ಕಟ್ಟೆ ಗಡು ಸ್ಥಳ ಇದ್ದು, ಇಲ್ಲಿ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗದ ಕಾರಣ 18 ವರ್ಷಗಳಿಂದ ನೇಮ ನಿಂತು ಹೋಗಿದೆ. ಇದೀಗ ಪ್ರಶ್ನಾಚಿಂತನೆಯಲ್ಲಿ ಗಡುಪಾಡು ಜಾಗದಲ್ಲಿ ನೇಮ ನಡೆಯಬೇಕೆಂದು ದೈವದ ಅಪ್ಪಣೆಯಾಗಿದ್ದು ಕಂಪನಿಯವರು ಸಹಕಾರ ನೀಡಿದರೆ ಮಾತ್ರ ಪರಿಹಾರ ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರು.