DAKSHINA KANNADA
ಪುತ್ತೂರು – ಆಮಂತ್ರಣ ಪತ್ರಿಕೆಯಲ್ಲಿ ಭಗತ್ ಸಿಂಗ್ ಪೋಟೋ ಹಾಕದಂತೆ ಚುನಾವಣಾ ಸಿಬ್ಬಂದಿಗಳ ಸೂಚನೆ
ಪುತ್ತೂರು ಮಾರ್ಚ್ 20: ಲೋಕಸಭೆ ಚುನಾವಣೆ ಹಿನ್ನಲೆ ನೀತಿಸಂಹಿತೆ ಜಾರಿಯಲ್ಲಿದ್ದು, ಖಾಸಗಿ, ಸಾರ್ವಜನಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯ ಮೇಲೂ ನಿಗಾ ಇಡಲಾಗುತ್ತಿದೆ. ಈ ನಡುವೆ ಪುತ್ತೂರು ಚುನಾವಣಾ ಕಛೇರಿಯ ಏಕಗವಾಕ್ಷಿ ಪದ್ಧತಿ ಸಿಬ್ಬಂದಿಗಳು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಫೋಟೋ ಹುಡುಕುವ ಧಾವಂತದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಫೋಟೋಕ್ಕೂ ನಿಶೇಧ ಹೇರಿದ್ದಾರೆ.
ಭಗತ್ ಸಿಂಗ್ ಸೇವಾ ಯುವಶಕ್ತಿ ಸಂಘದ ಧಾರ್ಮಿಕ ಕಾರ್ಯಕ್ರಮವೊಂದರ ಆಮಂತ್ರಣ ಪತ್ರಿಕೆಯಲ್ಲಿ ಭಗತ್ ಸಿಂಗ್ ಫೋಟೋವನ್ನು ಸಂಘಟನೆಯ ಆಯೋಜಕರು ಹಾಕಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಧಿಕಾರಿಗಳು ಪೋಟೋ ತೆಗೆಯುವಂತೆ ಸೂಚಿಸಿದ್ದಾರೆ. ಆಮಂತ್ರಣ ಪತ್ರಿಕೆಗಳಲ್ಲಿ ಯಾವುದೇ ವ್ಯಕ್ತಿಯ ಹೆಸರು, ಚಿತ್ರ ಪ್ರಕಟಿಸದಿರುವಂತೆ ಚುನಾವಣಾ ಇಲಾಖೆ ಸೂಚನೆ ಇದೆ ಎಂದ ಸಿಬ್ಬಂದಿಗಳು, ಸಾಮಾನ್ಯ ವ್ಯಕ್ತಿಗಳ ಸಾಲಿನಲ್ಲಿ ಭಗತ್ ಸಿಂಗ್ ಅವರನ್ನು ಸೇರಿಸಿದ್ದಾರೆ.
ಬಳಿಕ ಈ ಕುರಿತಂತೆ ಮಾಹಿತಿ ತಿಳಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹೋಪಾತ್ರ ಪರಿಶೀಲನೆ ನಡೆಸಿ, ಗೊಂದಲವನ್ನು ಸರಿಪಡಿಸಿ ಭಗತ್ ಸಿಂಗ್ ಫೋಟೋ ಗೆ ನಿಶೇಧ ಹೇರದಂತೆ ಸೂಚನೆ ನೀಡಿದರು.