Connect with us

    KARNATAKA

    ‘ಬಿಗ್‌ಬಾಸ್‌ ರಿಯಾಲಿಟಿ ಶೋ’ಗೆ ಕಂಟಕ, ಮಾನವ ಹಕ್ಕು ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗಗಳಿಗೆ ದೂರು..!

    ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋ ಗೆ ಕಂಟಕ ಆರಂಭವಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

    ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ವಿರುದ್ಧ ಶುಕ್ರವಾರ ರಾಜ್ಯ ಮಾನವ ಹಕ್ಕು ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗದಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶೋ ನಿಲ್ಲಿಸಿ, ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಲು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ದೂರು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಗೆ ಆಗಮಿಸಿ ದೂರು ನೀಡಿದ ಅವರು, ಚಿತ್ರನಟ-ಶೋ ನಿರೂಪಕ ಕಿಚ್ಚ ಸುದೀಪ್, ಕಲರ್ಸ್ ಕನ್ನಡ ಟಿವಿ ಬಿಜಿನೆಸ್ ಹೆಡ್, ವಯಾಕಾಮ್ 18 ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳನ್ನು ನರಕವಾಸದ ಹೆಸರಿನಲ್ಲಿ ಕೂಡಿಟ್ಟು ಸರಿಯಾದ ಆಹಾರ ಕೊಡದೆ ಹಿಂಸಿಸಲಾಗುತ್ತಿದೆ. ಈ ಮೂಲಕ ಶೋನಲ್ಲಿ ಮಾನವಹಕ್ಕುಗಳ ಹರಣವಾಗುತ್ತಿದೆ. ತಕ್ಷಣ ಕಾರ್ಯಕ್ರಮ ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎಂಬುವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ. ಟಾಸ್ಕ್‌ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಟಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಈ ಶೋಷಣೆಗೆ ಒಪ್ಪಿಗೆ ನೀಡಿದ್ದರೂ ಅದು ಕಾನೂನು ಪ್ರಕಾರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಿಗ್ ಬಾಸ್ ನಲ್ಲಿ ಹೀಗೆ ಜನರನ್ನು ಕೂಡಿಡುವುದೇ ಒಂದು ಅಪರಾಧವಾಗುತ್ತವೆ. ಯಾಕೆಂದರೆ ಯಾವ ಮನುಷ್ಯನನ್ನೂ ಅವನ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಕೂಡಿ ಹಾಕುವುದು ಅಪರಾಧವಾಗುತ್ತದೆ. ಬಿಗ್ ಬಾಸ್ ನಿರ್ಮಾಪಕರು ಮುಂದೆ ಕಾನೂನು ತೊಡಕು ಬಾರದೇ ಇರಲಿ ಎಂದು ಹಲವಾರು ನಿಬಂಧನೆಗಳು ಇರುವ ಕಾಗದಪತ್ರಗಳಿಗೆ ಸ್ಪರ್ಧಿಗಳ ಬಳಿ ಸಹಿ ಹಾಕಿಸಿಕೊಂಡಿರುತ್ತಾರೆ.
    ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಮಹಿಳೆಯರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ವಕೀಲೆ ರಕ್ಷಿತಾ ಪಿ ಸಿಂಗ್‌ ಅವರು ರಾಜ್ಯ ಮಹಿಳಾ ಆಯೋಗಕ್ಕೆ ಶುಕ್ರವಾರ ಮತ್ತೊಂದು ಪ್ರತ್ಯೇಕ ದೂರು ನೀಡಿದ್ದಾರೆ. ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ದಮನ ಮಾಡಿ ಸಾರ್ವಜನಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಖ್ಯಾತ ಚಲನಚಿತ್ರ ನಟ ಸುದೀಪ್ ನಿರೂಪಣೆ ಮಾಡುವ ಬಿಗ್ ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಭಾರತದ ನಾಗರಿಕರನ್ನು ಖಾಸಗಿ ವ್ಯಕ್ತಿಗಳು ಬಂಧನದಲ್ಲಿರಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ನೂರಾರು ಕ್ಯಾಮರಗಳಲ್ಲಿ ರೆಕಾರ್ಡ್ ಆಗುವಂತೆ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ. ಇವರಿಗೆ ಕೇವಲ ಗಂಜಿಯನ್ನು ಆಹಾರವಾಗಿ ನೀಡಲಾಗುತ್ತಿರುವುದು ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡದೆ ಅವರನ್ನು ದೈಹಿಕ ಬಾಧೆ ತೀರಿಸಿಕೊಳ್ಳಲು ಮತ್ತೊಬ್ಬರ ಅನುಮತಿ ಮೇರೆಗೆ ಶೌಚಾಲಯ ಉಪಯೋಗಿಸುವಂತಹ ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply