LATEST NEWS
ಆಟೋ ಚಾಲಕನ ಮಾನವೀಯತೆ…

ಉಡುಪಿ ಅಕ್ಟೋಬರ್ 14: ಆಟೋ ಒಂದರಲ್ಲಿ ಮಹಿಳೆಯೊಬ್ಬರು ಮರೆತು ಹೋಗಿದ್ದ 50 ಸಾವಿರ ಹಣ ಹಾಗೂ ದಾಖಲೆ ಪತ್ರವನ್ನು ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ರಿಕ್ಷಾದಿಂದ ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು.

ಮಹಿಳೆಯನ್ನು ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್‍ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದ್ದಾರೆ. ಏನೆಂದು ತೆರೆದಾಗ ಅದರಲ್ಲಿ 50ಸಾವಿರ ಹಣವಿದ್ದದ್ದು ಪತ್ತೆಯಾಗಿದೆ. ಅಲ್ಲದೆ ಹಣದ ಜೊತೆ ದಾಖಲೆ ಪತ್ರಗಳನ್ನು ಗಮನಿಸಿದ ರಿಕ್ಷಾ ಚಾಲಕ ಜಯಶೆಟ್ಟಿ ಮತ್ತೆ ಕಟಪಾಡಿಗೆ ಬಂದು ಮಹಿಳೆಯನ್ನು ಹುಡುಕಿ ಹಣ ಹಾಗೂ ದಾಖಲೆ ಪತ್ರವನ್ನು ಹಿಂದಿರುಗಿಸಿದ್ದಾರೆ. ಒಟ್ಟು 50 ಸಾವಿರ ರೂ. ಹಣ ಇತ್ತಾಗಿ ಮಹಿಳೆ ತಿಳಿಸಿದ್ದು, ಹಣ ಹಿಂದಿರುಗಿಸಿ ಮಾನವೀಯತೆ ಮೆರೆದ ಜಯಶೆಟ್ಟಿ ಅವರಿಗೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ