KARNATAKA
ರಾಮಸೇನಾ ಜಿಲ್ಲಾಧ್ಯಕ್ಷನಿಂದ ಪ್ರೇಯಸಿಯ ಕೊಲೆ ಯತ್ನ: ಮಹಿಳೆ ಗಂಭೀರ

ಧಾರವಾಡ, ಜುಲೈ 13: ರಾಮಸೇನಾದ ಜಿಲ್ಲಾಧ್ಯಕ್ಷ ತನ್ನ ಪ್ರೇಯಸಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸದ್ಯ ಪ್ರೇಯಸಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ವಿವಾಹಿತ ವಿಜಯ್ ಕದಂ ತನ್ನದೇ ಊರಿನ ಪದ್ಮಾ ಬೆಟಗೇರಿ ಎಂಬವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಪದ್ಮಾ, ವಿಜಯ್‌ನನ್ನು ಆತನ ಮೊದಲ ಪತ್ನಿ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಹಾಗೂ ಮೊದಲನೇ ಪತ್ನಿ ಬಳಿ ಹೋಗದಂತೆ ಪದ್ಮಾ ಕಿರಿಕಿರಿ ಮಾಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಇದೇ ವಿಚಾರಕ್ಕೆ ಕೋಪಗೊಂಡಿದ್ದ ವಿಜಯ್ ಇಂದು ಪದ್ಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಕೃತ್ಯದ ಬಳಿಕ ವಿಜಯ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಈ ಘಟನೆಗೂ ಮುನ್ನ ಇಬ್ಬರ ನಡುವೆ ಜಗಳ ಶುರುವಾಗಿತ್ತು. ನೀನು ಮನೆಗೆ ಬರಬೇಡ ಅಂತಾ ಪದ್ಮಾ ವಿಜಯ್‌ಗೆ ತಾಕೀತು ಮಾಡಿದ್ದಳು.
ಕೈಯಲ್ಲಿ ಚಾಕು ಹಿಡಿದು ಹೊರ ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಳು. ಬೆದರಿಕೆಯೊಡ್ಡಿದ ದೃಶ್ಯಗಳನ್ನು ವಿಜಯ್ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. 7 ವರ್ಷಗಳಿಂದ ಇವರಿಬ್ಬರ ನಡುವೆ ಸಂಬಂಧ ಇತ್ತು ಎನ್ನಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.