LATEST NEWS
ಬೆಂಗಳೂರು ನಂತರ ಮಂಗಳೂರಿಗೆ ಕಾಲಿಟ್ಟ ಎಟಿಎಂ ಸ್ಕಿಮ್ಮಿಂಗ್ – ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ
ಮಂಗಳೂರು ಫೆಬ್ರವರಿ 24: ಬೆಂಗಳೂರು ನಂತರ ಮಂಗಳೂರಿನಲ್ಲೂ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕೃತ್ಯದಲ್ಲಿ ದಿಲ್ಲಿ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಗ್ಲ್ಯಾಡವಿನ್ ಜಿಂಟೋ ಜಾಯ್, ಅಬ್ದುಲ್ ಮಜೀದ್, ರಾಹುಲ್ ಟಿ.ಎಸ್., ದೆಹಲಿಯ ದಿನೇಶ್ ಸಿಂಗ್ ರಾವುತ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ತಿಳಿಸಿದರು. ಆರೋಪಿಗಳಿಂದ ಎರಡು ಕಾರು, ಸ್ಕಿಮ್ಮಿಂಗ್ ಉಪಕರಣ, ನಕಲಿ ಎಟಿಎಂ ಕಾರ್ಡ್ ಸೇರಿದಂತೆ ₹25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಕಿಮ್ಮಿಂಗ್ ಅಳವಡಿಸಿ, ಹಣ ದೋಚಿದ ಬಗ್ಗೆ ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ 22 ಪ್ರಕರಣಗಳು ದಾಖಲಾಗಿವೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರಿನಲ್ಲಿ ಬಂದ ಯುವಕರ ತಂಡ ಮಂಗಳಾದೇವಿ ಎಟಿಎಂನಲ್ಲಿ ಸ್ಕಿಮ್ಮಿಂಗ್ ಕೃತ್ಯಕ್ಕೆ ಹೊಂಚು ಹಾಕುತ್ತಿತ್ತು. ಇದನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಗಮನಿಸಿ, ಎಟಿಎಂನತ್ತ ತೆರಳಿದ್ದಾರೆ. ಇದನ್ನು ನೋಡಿದ ಯುವಕರಿಬ್ಬರು ಅಲ್ಲಿಂದ ಓಡಿ ತಪ್ಪಿಸಲು ಯತ್ನಿಸಿದ್ದಾರೆ. ಕೂಡಲೇ ಪೆಟ್ರೋಲ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಗಳನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣ ಸೈಬರ್ ಠಾಣೆಗೆ ಹಸ್ತಾಂತರಿಸಲಾಗಿದೆ.
ದಿಲ್ಲಿ ಮೂಲದ ಒಂದೇ ತಂಡ ಸುಮಾರು ಮೂರು ತಿಂಗಳಿನಿಂದೀಚೆಗೆ ನಗರದ ನಾನಾ ಕಡೆ ಎಟಿಎಂಗಳಿಗೆ ಹೋಗಿ ಸ್ಕಿಮ್ಮಿಂಗ್ ನಡೆಸಿ 5 ಲಕ್ಷಕ್ಕೂ ಅಧಿಕ ರೂ. ವಂಚನೆ ಮಾಡಿದೆ. ಈ ಪ್ರಕರಣದ ಸೂತ್ರಧಾರ ದಿಲ್ಲಿ ಮೂಲದವನಾಗಿದ್ದಾನೆ.