DAKSHINA KANNADA
ಎಟಿಎಂ ಮೆಷಿನ್, ಸಿಸಿಟಿವಿಗಳನ್ನು ಜಖಂ ಮಾಡಿ ಕಳ್ಳತನಕ್ಕೆ ಯತ್ನ: ಆರೋಪಿ ಬಂಧನ
ಉಪ್ಪಿನಂಗಡಿ , ಮೇ 02 : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮೆಷಿನ್, ಸಿಸಿಟಿವಿಗಳನ್ನು ಜಖಂ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲ್ಲೂಕಿನ ಸವಣೂರು ಗ್ರಾಮದ ಚಾಪಳ್ಳ ಮಸೀದಿ ಹತ್ತಿರದ ಶಾಂತಿನಗರ ಮಾಂತೇರು ಮನೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಸಮೀರ್ ಯಾನೆ ಅಮ್ಮಿ(23) ಎಂದು ಗುರುತಿಸಲಾಗಿದೆ.
ಈತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ಪೇಟೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎರಡು ಎಟಿಎಮ್ ಮಷಿನ್ ಹಾಗೂ ರೂಮ್ ನಲ್ಲಿದ್ದ 3 ಸಿಸಿಟಿವಿ ಕ್ಯಾಮೆರಾಗಳನ್ನು ಆಯುಧದಿಂದ ಜಖಂಗೊಳಿಸಿ, ನಂತರ ಕಳ್ಳತನಕ್ಕೆ ಪ್ರಯತ್ನಿಸಿದ್ದ. ಈ ಕುರಿತು ಇಲ್ಲಿನ ಬ್ಯಾಂಕ್ ಮ್ಯಾನೇಜರ್ ಶ್ರೀಧರ್‌ರವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಚರಣೆಯನ್ನು ಎಸ್ಪಿ ಸೋನಾವಣೆ ರಿಷಿಕೇಶ್ ಐಪಿಎಸ್ ಮತ್ತು ಅಡಿಷನಲ್ ಎಸ್ಪಿ ಭಾಸ್ಕರ ಒಕ್ಕಲಿಗರವರ ಆದೇಶದ ಮೇರೆಗೆ, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಗಾನ.ಪಿ.ಕುಮಾರ್‌ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಉಮೇಶ ಉಪ್ಪಳಿಕೆರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಎಸೈ ಕುಮಾರ್.ಸಿ ಕಾಂಬ್ಲೆ, ಪ್ರೊಬೆಷನರಿ ಪಿಎಸ್‌ಐ ಅನಿಲ್ ಕುಮಾರ್.ಡಿ ಸಿಬ್ಬಂದಿಗಳಾದ ಎಎಸ್‌ಐ ಚೋಮ.ಪಿ, ಹರಿಶ್ಚಂದ್ರ, ಜಗದೀಶ.ಎ, ಶಿವರಾಜ್ ರವರು ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.