Connect with us

BELTHANGADI

ಧರ್ಮಸ್ಥಳ – ಶವ ಕಳೇಬರ ಪತ್ತೆ ಕಾರ್ಯದ ವೇಳೆ ಎಟಿಎಂ , ಪಾನ್ ಕಾರ್ಡ್ ಮತ್ತು ಹರಿದ ರವಿಕೆ ಪತ್ತೆ…!!

ಬೆಳ್ತಂಗಡಿ ಜುಲೈ 30: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ ಸ್ಥಳಗಳನ್ನು ಸಾಕ್ಷಿಗಾಗಿ ಅಗೆಯುವ ವೇಳೆ ಒಂದು ಎಟಿಎಂ ಕಾರ್ಡ್ ಮತ್ತು ಪಾನ್ ಕಾರ್ಡ್ ಹಾಗೂ ಹರಿದ ರವಿಕೆ ಪತ್ತೆಯಾಗಿದೆ ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಎಸ್‌ಐಟಿ ಕಾರ್ಯಾಚರಣೆಯು ಪ್ರಕರಣದಲ್ಲಿ ಹೊಸ ಬೆಳವಣಿಗೆಗೆ ದಾರಿ ತೆರೆದಿದೆ. ನಿನ್ನೆ ಮಂಗಳವಾರದ ಕಾರ್ಯಾಚರಣೆ ವೇಳೆ ಸುಮಾರು 2.5 ಅಡಿ ಆಳದಲ್ಲಿ ಕೆಂಪು ಬಣ್ಣದ ರವಿಕೆ, PAN ಕಾರ್ಡ್ ಹಾಗೂ ATM ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ದೃಢಪಡಿಸಿವೆ. ಈ ಬೆಳವಣಿಗೆ ತನಿಖೆಗೆ ಹೊಸ ಆಯಾಮ ನೀಡಿದೆ ಎಂದವರು ಹೇಳಿದ್ದಾರೆ.

ಎಸ್‌ಐಟಿಯು ಈ ಬೆಳವಣಿಗೆ ನಂತರ ತಕ್ಷಣ ಸ್ಥಳದ 10 ಅಡಿ ಆಳದ ವರೆಗೆ ಅಗೆಯುವ ನಿರ್ಧಾರ ತೆಗೆದುಕೊಂಡಿದ್ದು, ಇದು ಅವರ ವೃತ್ತಿಪರ ಬದ್ಧತೆಯನ್ನು ತೋರಿಸುತ್ತದೆ. ಈ ಕಾರ್ಯವು ಶ್ರಮದಾಯಕವಾದರೂ, ಯಾವುದೇ ಸಾಕ್ಷ್ಯವನ್ನು ಕಡೆಗಣಿಸದೆ ಸಮಗ್ರವಾಗಿ ಪರಿಶೀಲಿಸುವ ದೃಢ ಸಂಕಲ್ಪ ಮಾಡಿರುವ ಎಸ್‌ಐಟಿಯ ಕಾರ್ಯವೈಖರಿಯು ಶ್ಲಾಘನೀಯ ಎಂದು ವಕೀಲ ಮಂಜುನಾಥ್ ಎನ್ ಹೇಳಿದ್ದಾರೆ. ಪತ್ತೆಯಾಗಿರುವ PAN ಕಾರ್ಡ್ ಮತ್ತು ATM ಕಾರ್ಡ್ ಗಳಲ್ಲಿ ಒಂದರ ಮೇಲೆ ಪುರುಷನ ಹೆಸರು ಮತ್ತು ಇನ್ನೊಂದರಲ್ಲಿ ‘ಲಕ್ಷ್ಮಿ’ ಎಂಬ ಹೆಸರಿರುವುದು ಕಂಡುಬಂದಿದೆ. ಈ ಸುಳಿವುಗಳು ವಿಚಾರಣೆಗೆ ಹೊಸ ದಿಕ್ಕು ನೀಡಬಹುದು. ಎಸ್‌ಐಟಿ ಅಧಿಕಾರಿಗಳು ಈ ಪ್ರಮುಖ ಸುಳಿವಿನ ಬೆನ್ನತ್ತಿ ಹೋಗುತ್ತಾರೆ ಎಂಬ ಭರವಸೆಯಿದೆ ಎಂದು ಅವರು ಹೇಳಿದ್ದಾರೆ.

ಇದುವರೆಗೆ ಎಸ್‌ಐಟಿ ಪ್ರದರ್ಶಿಸಿರುವ ಗಂಭೀರತೆ, ಶಿಸ್ತು ಮತ್ತು ಕಾರ್ಯದಕ್ಷತೆ ನಮಗೆ ಭರವಸೆಯನ್ನು ಹುಟ್ಟುಹಾಕಿದೆ. ಮುಂದಿನ ಸ್ಥಳಗಳ ಪರಿಶೀಲನೆಯ ವೇಳೆ ನಾವು ಅವರ ಕೆಲಸಗಳಲ್ಲಿ ಸಂಪೂರ್ಣ ನಂಬಿಕೆಯನ್ನು ಇಡುತ್ತೇವೆ ಎಂದು ವಕೀಲ ಮಂಜುನಾಥ್ ಎನ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಪತ್ರಿಕಾ ಪ್ರಕಟಣೆಯ ಮಾಹಿತಿ ಕುರಿತಂತೆ ಇಲ್ಲಿಯವರೆಗೆ ಎಸ್ ಐಟಿ ತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *