LATEST NEWS
ನರಹಂತಕನಿಂದ ಹತ್ಯೆಗೀಡಾದ ತನ್ನ ಇಬ್ಬರು ಹೆಣ್ಣು ಮಕ್ಕಳು ಮಂಗಳೂರಿನಲ್ಲಿದ ರೂಂ ನೋಡಿ ಕಣ್ಣೀರಿಟ್ಟ ನೂರ್ ಮಹಮ್ಮದ್
ಮಂಗಳೂರು ನವೆಂಬರ್ 26: ಉಡುಪಿಯ ನೇಜಾರಿನಲ್ಲಿ ನರಹಂತಕ ಪ್ರವೀಣ್ ಚೌಗುಲೆಯಿಂದ ಹತ್ಯೆಗೀಡಾದ ಐನಾಝ್ ಮತ್ತು ಅಫ್ನಾನ್ ಮಂಗಳೂರಿನಲ್ಲಿ ನೆಲೆಸಿದ್ದ ಮನೆಗೆ ಆಕೆಯ ತಂದೆ ನೂರ್ ಅಹಮ್ಮದ್ ಭೇಟಿ ನೀಡಿ ರೂಂನಲ್ಲಿನ ವಸ್ತುಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಬಳಿಕ ಮಾತನಾಡಿದ ಅವರು ತನ್ನ ಇಬ್ಬರು ಮಕ್ಕಳು. ಇಸ್ಲಾಂ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದರು ಎಂದ ಅವರು ಮಕ್ಕಳಿಬ್ಬರೂ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ತಾವೇ ಅಡುಗೆಯನ್ನೂ ಮಾಡಿಕೊಳ್ಳುತ್ತಿದ್ದರು. ಆರಂಭದಲ್ಲಿ ಬಾಡಿಗೆ ಮನೆ ಹುಡುಕಿಕೊಡಲು ಪ್ರವೀಣ್ ಚೌಗುಲೆ ನೆರವಾಗಿದ್ದ. ಈ ಬಗ್ಗೆ ಮನೆ ಮಾಲೀಕರ ಜೊತೆಗೂ ಮಾತನಾಡಿದ್ದು, ಮನೆ ತೋರಿಸುವುದಕ್ಕೆ ಮಾತ್ರ ಪ್ರವೀಣ್ ಇಲ್ಲಿಗೆ ಬಂದಿದ್ದ ಎಂದು ಹೇಳಿದ್ದಾರೆ. ಈ ನಡುವೆ, ಪ್ರವೀಣ ಚೌಗುಲೆ ಹೊಸತಾಗಿ ಕಾರು ಖರೀದಿಸಿದ್ದು ತನ್ನಲ್ಲಿದ್ದ ಸ್ಕೂಟರನ್ನು ಐನಾಝ್ ಗೆ ನೀಡಿದ್ದ. ಇದನ್ನು ಐನಾಝ್ ಕೂಡ ತನಗೆ ಮಾಹಿತಿ ನೀಡಿದ್ದಳು. ಸ್ಕೂಟರಿಗೆ 28 ಸಾವಿರ ರೂಪಾಯಿ ನೀಡಿದ್ದೇನೆ ಎಂದು ತಿಳಿಸಿದ್ದಳು.
ಮನೆಯ ಹೊರಗಡೆ ಆ ಸ್ಕೂಟರ್ ಹಾಗೇ ಇದೆ. ಮನೆಯಲ್ಲಿ ಮಕ್ಕಳಿಬ್ಬರ ವಸ್ತುಗಳನ್ನು ನೋಡಿ ದುಃಖ ಉಕ್ಕಿ ಬಂದಿದೆ. ಹೆತ್ತವರು ಮುಸ್ಸಂಜೆಯಲ್ಲಿರುವಾಗ ಯೌವನಕ್ಕೆ ಬಂದ ಮಕ್ಕಳು ಈ ರೀತಿ ಕೊಲೆಯಾಗುತ್ತಾರೆಂದು ಯಾರೂ ಅಂದುಕೊಳ್ಳಲ್ಲ.
ಉದ್ಯೋಗದಲ್ಲಿ ಸೀನಿಯರ್ ಆಗಿದ್ದರಿಂದ ಪ್ರವೀಣ್ ಚೌಗುಲೆಗೆ ಮಂಗಳೂರಿನಲ್ಲಿ ಪರಿಚಯ ಇದ್ದುದರಿಂದ ಬಾಡಿಗೆ ಮನೆ ಪಡೆಯುವಾಗ ಆತನ ನೆರವು ಕೇಳಿದ್ದಳು. ಈ ಬಗ್ಗೆ ತನ್ನಲ್ಲಿಯೂ ಐನಾಝ್ ಹೇಳಿಕೊಂಡಿದ್ದಳು. ಮನೆಯನ್ನೂ ನೋಡುವುದಕ್ಕೆ ನಾನು ಈ ಹಿಂದೆ ಬಂದಿದ್ದೆ. ಮನೆಯಲ್ಲಿ ಅಡುಗೆ ಇನ್ನಿತರ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡಿದ್ದರು. ಇಬ್ಬರೂ ಸೇರಿಕೊಂಡು ಮನೆ ನಡೆಸುತ್ತಿದ್ದರು. ಮನೆಯಲ್ಲಿ ಬುರ್ಖಾ, ಇನ್ನಿತರ ಎಲ್ಲ ಬಟ್ಟೆ ಬರೆಗಳೂ ಇವೆ ಎಂದು ಎಲ್ಲವನ್ನೂ ನೋಡುತ್ತಲೇ ಕಣ್ಣೀರು ಹಾಕಿದ್ದಾರೆ. ಆರೋಪಿ ಪ್ರವೀಣ್ ಚೌಗುಲೆಯನ್ನು ಬಂಧಿಸಿ ಜೈಲಿಗಟ್ಟಿದ ಬಳಿಕ ಮೊದಲ ಬಾರಿಗೆ ನೂರ್ ಮಹಮ್ಮದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.