LATEST NEWS
ಜೈಪುರ ಭೀಕರ ಅಪಘಾತ – ಸುಟ್ಟು ಕರಕಲಾದ 7 ಮಂದಿ – 40ಕ್ಕೂ ಅಧಿಕ ವಾಹನ ಬೆಂಕಿಗಾಹುತಿ
ಜೈಪುರ ಡಿಸೆಂಬರ್ 20: ಟ್ರಕ್ ಒಂದು ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ ಸಿಎನ್ ಜಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿಕೊಂಡ ಬೆಂಕಿಗೆ 7ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಅಜ್ಮೇರ್ ರಸ್ತೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಟ್ರಕ್ ಒಂದು ಇತರೆ ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ, ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಲಾಗಿದ್ದ ಸಿಎನ್‌ಜಿ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯ ಕೆನ್ನಾಲಗೆಯಲ್ಲಿ ಕನಿಷ್ಠ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ. ಇನ್ನೂ 41 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕನಿಷ್ಠ 28 ಸಂತ್ರಸ್ತರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರಕ್ ಅಪ್ಪಳಿಸಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಇದು ಸುತ್ತಮುತ್ತಲಿನ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.