BANTWAL
ಯುವಕನನ್ನ ಅಟ್ಟಾಡಿಸಿ ರಾಡಿನಿಂದ ಬಡಿದು ಕೊಲೆಗೆ ಯತ್ನ

ಯುವಕನನ್ನ ಅಟ್ಟಾಡಿಸಿ ರಾಡಿನಿಂದ ಬಡಿದು ಕೊಲೆಗೆ ಯತ್ನ
ಬಂಟ್ವಾಳ ಸೆಪ್ಟೆಂಬರ್ 15: ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ತಲವಾರು ಹಾಗೂ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿಟ್ಲದ ಕನ್ಯಾನದ ಕೆಳಗಿನಪೇಟೆಯಲ್ಲಿ ನಡೆದಿದೆ.
ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಹಮೀದ್ ಎಂಬವರ ಪುತ್ರ ನವಾಫ್ (23) ಹಲ್ಲೆಗೊಳಗಾದ ಯುವಕ. ನವಾಫ್ ಕೇರಳದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಮರಳಿದ್ದರು. ಕನ್ಯಾನ ಶಾಲೆಯಿಂದ ಸರ್ಟಿಫಿಕೆಟ್ ಪಡೆಯಲೆಂದು ಕನ್ಯಾನ ಪೇಟೆಗೆ ಬಂದಿದ್ದರು.

ಈ ಸಂದರ್ಭದಲ್ಲಿ ಕೇರಳ ಕಡೆಯಿಂದ ಆಲ್ಟೋ 800 ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದ ದುಷ್ಕರ್ಮಿಗಳ ತಂಡವೊಂದು ನವಾಫ್ ಮೇಲೆ ತಲವಾರ್ ಹಾಗೂ ರಾಡ್ನಿಂದ ದಾಳಿ ನಡೆಸಿದೆ. ಕನ್ಯಾನದ ಕುಖ್ಯಾತ ಕ್ರಿಮಿನಲ್ ಹಾಗೂ ಕೇರಳ ಮೂಲದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭ ನವಾಫ್ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ.
ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.