BELTHANGADI
ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ
ಆರ್‌ಟಿಐ ಕಾರ್ಯಕರ್ತನಿಗೆ ಬಿಸಿ ನೀರು ಎರಚಿದ ಗ್ರಾಪಂ ಉಪಾಧ್ಯಕ್ಷೆ
ಮಂಗಳೂರು ಡಿಸೆಂಬರ್ 5: ಬಸವ ವಸತಿ ಯೋಜನೆಯ ಅಕ್ರಮವನ್ನು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತನೊಬ್ಬನ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಿಸಿ ನೀರು ಎರಚಿ ದೌರ್ಜನ್ಯ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದಿದೆ.
ಉಜಿರೆ ಗ್ರಾಮ ಪಂಚಾಯತ್‍ಯ ವಿನುತಾ ರಜತ್ ಗೌಡ ಬಿಸಿ ನೀರು ಎರಚಿದ ಉಪಾಧ್ಯಕ್ಷೆ. ಇಂದು ವಿನುತಾ ಅವರ ಮನೆಗೆ ಅಧಿಕಾರಿಗಳ ಜೊತೆಗೆ ಬಂದಿದ್ದ ಬೆಳ್ತಂಗಡಿ ತಾಲೂಕಿನ ಆರ್‌ಟಿಐ ಕಾರ್ಯಕರ್ತ ಬಾಲಸುಬ್ರಹ್ಮಣ್ಯ ಭಟ್(41) ಅವರ ಹಲ್ಲೆ ಮಾಡಿದ್ದಾರೆ.
ಬಸವ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ರಾಜೀವ ಗಾಂಧಿ ವಸತಿ ನಿಗಮಕ್ಕೆ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ತಾಲೂಕು ಪಂಚಾಯತ್ ಇಓ ಕುಸುಮಾಧರ್ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆಗೆ ಆಗಮಿಸಿದ್ದರು. ಉಜಿರೆ ಗ್ರಾಮದ ಮಲೆಬೆಟ್ಟಿನಲ್ಲಿರುವ ಉಪಾಧ್ಯಕ್ಷೆಯ ಮನೆಯ ಅಂಗಳದಲ್ಲಿ ವಿಚಾರಣೆ ನಡೆಯುತ್ತಿತು. ಈ ವೇಳೆ ವಿನುತಾ ರಜತ್ ಗೌಡ ಮನೆಯ ಒಳಗಿಂದ ಬಿಸಿನೀರು ತಂದು ಬಾಲಸುಬ್ರಹ್ಮಣ್ಯ ಭಟ್ ಮೇಲೆ ಎರಚಿದ್ದಾರೆ.
ಬಾಲಸುಬ್ರಹ್ಮಣ್ಯ ಅವರನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.