LATEST NEWS
ಕಥೋಲಿಕ್ ಸಭಾ ಅಧ್ಯಕ್ಷರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ 24 ಗಂಟೆ ಗಡುವು
ಮಂಗಳೂರು: ಕಥೊಲಿಕ್ ಸಭಾ ಅಧ್ಯಕ್ಷರ ಹಲ್ಲೆ ಪ್ರಕರಣ ದುಷ್ಕರ್ಮಿಗಳನ್ನು 24 ತಾಸುಗಳ ಮೊದಲು ಬಂಧಿಸದಿದ್ದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ, ಎಸ್ಪಿ, ಡಿಸಿ ಕಚೇರಿ ಎದುರು ಧರಣಿ ನಡೆಸುದಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಜೆರೊಮ್ ಡಿಸೋಜ ಪಾನೀರ್ ಇವರ ಮೇಲೆ ದಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಆಳ್ವಿನ್ ಅವರು ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62 ನೇ ತೋಕೂರು ಕೆಂಜಾರು ಈ ಪ್ರದೇಶಗಳ ದ್ವೀಪಗಳನ್ನು ಉಳಿಸುವ ಉದ್ದೇಶದಿಂದ ದಿನಾಂಕ 27.09.2024ರಂದು ನಡೆಸಿದ ಬೃಹತ್ ಪ್ರತಿಭಟನೆಯ ಪ್ರತಿಫಲವಾಗಿ ಶಾಂತಿ ಪ್ರಿಯರಾದ ನಮಗೆ ಸಿಕ್ಕ ಕಾಣಿಕೆಯಂತಾಗಿದೆ.
ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ನಮ್ಮ ಮೇಲೆ ಇನ್ನೆಷ್ಟು ಹಲ್ಲೆ ನಡೆಸಿದರೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ. ಆಲ್ವಿನ್ ಡಿಸೋಜರವರ ಮೇಲೆ ನಡೆಸಿರುವಂತಹ ಮಾರಣಾಂತಿಕ ಹಲ್ಲೆಯು ನಮ್ಮೆಲ್ಲರಿಗೂ ಅತೀವ ನೋವು ತಂದಿದೆ ಹಾಗೂ ನಮ್ಮನ್ನು ಭಯಭೀತರನ್ನಾಗಿಸಿದೆ. ಮುಂದಿನ 24 ಗಂಟೆಗಳ ಒಳಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯ ಸಿಗುವವರೆಗೆ ವಾಮಂಜೂರು ಗ್ರಾಮಾಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆಯನ್ನು ಕೈಗೊಳ್ಳಲಿದ್ದೇವೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕ ಫಾ. ಜೆ.ಬಿ. ಸಲ್ಡಾನ್ಹಾ, ಮಾಜಿ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೋಸ್ತಾ, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಶಾಂತ್ ಮೊಂತೇರೊ, ಸಾಮಾಜಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್, ಪಾವೂರು ಉಳಿಯ ದ್ವೀಪ ನಿವಾಸಿ ಗಿಲ್ಬರ್ಟ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.