Connect with us

LATEST NEWS

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮ ಅವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂವಮ್ಮ ಅವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಮಂಗಳೂರು ಸೆಪ್ಟೆಂಬರ್ 6: ಇತ್ತೀಚೆಗೆ ಮುಕ್ತಾಯಗೊಂಡ 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ 4×400 ರೀಲೇ ಚಿನ್ನದ ಪದಕ ಹಾಗೂ ಮಿಶ್ರ ರೀಲೇಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತೀಯ ರಿಲೇ ತಂಡದ ಪ್ರಮುಖ ಓಟಗಾರ್ತಿ ಎಂ.ಆರ್ ಪೂವಮ್ಮ ಅವರಿಂದು ಮಂಗಳೂರಿಗೆ ಆಗಮಿಸಿದ್ದು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಇಂಡೋನೇಶಿಯಾದ ಜಕಾರ್ತದಲ್ಲಿ ನಡೆದ 18ನೆ ಏಷ್ಯನ್ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಎಂ. ಆರ್ ಪೂವಮ್ಮ ಚಿನ್ನದ ಪದಕ ಹಾಗೂ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಇಂದು ಪದಕ ಗೆದ್ದ ನಂತರ ಮಂಗಳೂರಿಗೆ ಆಗಮಿಸಿರುವ ಪೂವಮ್ಮ ಅವರನ್ನು ಜಿಲ್ಲಾಡಳಿತ ಅದ್ದೂರಿಯಾಗಿ ಸ್ವಾಗತಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೂವಮ್ಮ ನನ್ನ ಪೋಷಕರ ಪ್ರೋತ್ಸಾಹ, ಬೆಂಬಲದಿಂದಾಗಿಯೇ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ಪ್ರಥಮವಾಗಿ ನನ್ನ ಈ ಪದಕಗಳು ಪೋಷಕರು ಮತ್ತು ಈ ಬಾರಿ ಕೊಡಗು ಭಾರೀ ಜಲಪ್ರಳಯಕ್ಕೆ ತುತ್ತಾಗಿರುವುದರಿಂದ ಅಲ್ಲಿಯ ಜನರಿಗೆ ಅರ್ಪಿಸುತ್ತೇನೆ ಎಂದರು.

ತವರಿನ ಸ್ವಾಗತಕ್ಕೆ ತುಂಬಾ ಖುಷಿಯಾಗುತ್ತಿದೆ. 2014ರಲ್ಲಿಯೂ ಇದೇ ರೀತಿಯಾದ ಸ್ವಾಗತ ದೊರಕಿತ್ತು. ಇನ್ನು ಮುಂದಿನ ವರ್ಷ ಏಷ್ಯನ್ ಚಾಂಪಿಯನ್‌ಶಿಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ತಯಾರಿ ಆಗಬೇಕಾಗಿದೆ. ತಯಾರಿಗೆ ಶಿಬಿರ ಮುಂದಿನ ಅಕ್ಟೋಬರ್‌ನಲ್ಲಿ ನಿರ್ಧಾರವಾಗಲಿದೆ. 2020ರಲ್ಲಿ ಒಲಿಪಿಂಕ್ಸ್‌ನಲ್ಲಿ ಭಾಗವಹಿಸುವ ಇರಾದೆ ಇದೆ. ಅದಕ್ಕಾಗಿ ಮುಂದಿನ ವರ್ಷದಿಂದ ತರಬೇತಿ ಆರಂಭವಾಗಲಿದೆ’’ ಎಂದು ಪೂವಮ್ಮ ತಿಳಿಸಿದರು.

ನಿನ್ನೆ ಪ್ರಧಾನಮಂತ್ರಿ ಹಾಗೂ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದು ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದು, ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *