LATEST NEWS
ದಿನಕ್ಕೊಂದು ಕಥೆ- ಶ್ಯಾವಿಗೆ ಬಾತ್
ಶ್ಯಾವಿಗೆ ಬಾತ್
ಅಲ್ಲ..ಈ ಮನುಷ್ಯರು ಬಾಯಿ ರುಚಿಗೆ ಅಂತ ಅದೆಷ್ಟು ಬಗೆ ಮಾಡ್ತಾರಪ್ಪಾ…ಓ ದೇವರೇ..ಅಕ್ಕಿ,ಗೋಧಿ,ರಾಗಿ,ಜೋಳ,ನವಣೆ,ಉದ್ದು,ಹೆಸರು, ಪಟ್ಟಿ ಮಾಡಿದರೆ ಹನುಮನ ಬಾಲ.!
ನೋಡಿ..ಒಂದು ದೊಡ್ಡ ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಿಟ್ಟಿದ್ದರು ನಮ್ಮನ್ನು. ಅದೇರೀ..ನಾವು ಅಂದ್ರೆ ನಾವೇ. ಅಕ್ಕಿ ಕಾಳುಗಳು.
“ನಾಳೆ ತಿಂಡಿ ಒತ್ತು ಶ್ಯಾವಿಗೆ ಮಾಡೋಣ” ಅನ್ನುವುದು ಕೇಳಿಸಿತು. ಅಂದುಕೊಂಡೆ ಈಗ ಲೋಟ ಹಿಡಿದುಕೊಂಡು ಬರುವರೆಂದು. ಕುಡ್ತೆ,ಪಾವು,ಸೇರಲ್ಲಿ ನಮ್ಮನ್ನು ಅಳೆಯುವವರು ಕೆಲವೇ ಮಂದಿ. ಏನಿದ್ರೂ ಈಗ ಲೋಟದಲ್ಲೇ ಅಳತೆ.
ಗಟ್ಟಿ,ಗಟ್ಟಿಯಾಗಿ ಒಟ್ಟಿಗಿದ್ದ ನಮ್ಮಲ್ಲಿಂದ ಒಂದಷ್ಟು ತೆಗೆದು ಪಾತ್ರೆಗೆ ಹಾಕಿ….ಜೋರೋ ಎಂದು ಸುರಿದರು ನೀರು. ಗಂಟೆಗಟ್ಲೆ ನೆನೆದು ಒಂದಷ್ಟು ಮೆತ್ತಗಾದವು. ತೊಳೆದು ಗ್ರ್ಯಾಂಡರ್ ಗೆ ಹಾಕಿ…ನುಣ್ಣಗೆ ಅರೆದರು. ಮತ್ತೆ ಬಾಣಲೆಗೆ ಹಿಟ್ಟು ಸುರಿದು ಕಾಯಿಸಿದರು. ಉಂಡೆ ಮಾಡಿದರು. ಅದೋ…ಮತ್ತೆ ಒಟ್ಟಾಗಿ ತಟ್ಟೆಯಲಿಟ್ಟು ಹಬೆಯಲ್ಲಿ ಬೇಯಿಸಿದರು. ಆಮೇಲೆ ಎತ್ತಿ .ಎತ್ತಿ ಒತ್ತು ಮಣೆಗೆ ತಳ್ಳಿದರು. ಒತ್ತಾಯದಲಿ ಒತ್ತಿದರು. ಓಹ್..ದೇವರೇ..ಹೇಗಾದೆವು ನಾವು. ಪುಟ್ಟ,ಪುಟ್ಟ ಕಾಳುಗಳಿಂದ ಉದ್ದುದ್ದಾ ನೂಲಿನ ರೂಪ.! ಬೇರೆ,ಬೇರೆ ಬಂದರೂ ಸುತ್ತಿ,ಸುತ್ತಿ ಒಂದೇ ಮಾಡಿ…ತಟ್ಟೆಯಲಿಟ್ಟರು. ಅದೇನು ಚೆಲುವು ನಮ್ಮದು.ವಾರೆ ವಾಹ್..ಡಬ್ಬದೊಳಗಿನ ನಮ್ಮ ಜೊತೆಗಾರರಿಗೆ ಗುರುತೇ ಸಿಗದು. ಅಷ್ಟು ಮಾರ್ಪಾಡು ಮಾಡಿದರು ಈ ಜಾಣ ಮಾನವರು.
ಇನ್ನು ತಿನ್ನಲೂ ಅದೆಷ್ಟು ರೀತಿಯಪ್ಪ..ಎಣ್ಣೆ,ಉಪ್ಪಿನಕಾಯಿ…ಆಮೇಲೆ ಸಾಂಬಾರ್…ರಸಾಯನ..ಅದೂ ಸಾಲದೆಂದು ಒಂದಷ್ಟು ಮೊಸರು…ಅಬ್ಬಬ್ಬಾ ಇವರ ಬಯಕೆಗಳೇ…ಬಾಯಿ ರುಚಿಗಳೇ..ಕೆಲವೊಮ್ಮೆ ಸಹಿಸಿ,ಸಹಿಸಿ ನಮಗೂ ಸಾಕಾಗಿ ಹೋಗುತ್ತದೆ.
ಅವರಿಗೆ ಬೇಕೆನಿಸಿದರೆ ಜೊತೆ ಮಾಡುತ್ತಾರೆ. ಬೇಡವೆಂದರೆ ಬೇರ್ಪಡಿಸುತ್ತಾರೆ.! ಸ್ವಾರ್ಥಿಗಳು ಈ ಮಾನವರು.
ಹೋ…ನಮ್ಮನ್ನು ತಂಗಳು ಪೆಟ್ಟಿಗೆಯೊಳಗೆ ಇಡುವ ವಿಷಯ ಮಾತನಾಡುತ್ತಿದ್ದಾರೆ. ಬಹುಶಃ ನಾಳೆ ಇನ್ನೇನೋ ಮಾಡಲು. ಅದನ್ನೂ ಅನುಭವಿಸಿ ಬರುವೆ. ಅಲ್ಲಿವರೆಗೂ ಟಾಟಾ ಬೈ ಬೈ ಟೇಕ್ ಕೇರ್
ಅರುಣಾ ಜಿ ಭಟ್ ಬದಿಕೋಡಿ