DAKSHINA KANNADA
ಮಂಗಳೂರು ಪೊಲೀಸರಿಗೆ ಸವಾಲಾದ ‘ಪೋಕ್ಸೋ ಪ್ರಕರಣದ ಆರೋಪಿ ಶಿಕ್ಷಕನ ಬಂಧನ..!
ಕಿನ್ನಿಕೋಳಿ : ಮಂಗಳೂರಿನ ಹೊರವಲಯದ ಕಲ್ಲಮುಂಡ್ಕೂರು ಸರಕಾರಿ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿ ಮೇಲೆ ಪೋಕ್ಸೊ ಪ್ರಕರಣ ದಾಖಲಾಗಿದ್ದರೂ ಇನ್ನೂ ಕೂಡ ಬಂಧನವಾಗದಿರುವ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆ.28ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಅಧ್ಯಾಪಕ ಗುರುವ ಮೊಗೇರಾ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕುರುಕುಳ ನೀಡಿರುವ ಬಗ್ಗೆ ಮಾ.13ರಂದು ಶಾಲೆಯ ಮುಖ್ಯೋಪಾಧ್ಯಾಯರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮಾ.14ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು.
ಈ ನಡುವೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಮಹಿಳಾ ಠಾಣೆಯ ಪೊಲೀಸರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಅಧ್ಯಾಪಕ ಗುರುವ ಮೊಗೇರ ಲೈಂಗಿಕ ಕಿರುಕುಳ ನೀಡಿರುವುದನ್ನು ವಿದ್ಯಾರ್ಥಿನಿಯರು ಬರವಣಿಗೆಯಲ್ಲಿ ನೀಡಿದ್ದರು ಎಂದು ತಿಳಿದು ಬಂದಿದೆ.
ಪೊಲೀಸ್ ಇಲಾಖೆ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದ ಆರೋಪಿಯನ್ನು ಬಂಧಿಸಲು ನಿರ್ಲಕ್ಷ್ಯವಹಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಾತಿ ಆಧಾರಿತ ಶಿಕ್ಷಕವಾಗಿರುವ ಕಾರಣ ಸ್ವ ಜಾತಿಯವರು ಆರೋಪಿ ಪರ ನಿಂತರೆ ಎಂಬ ಕಾರಣಕ್ಕೆ ಸ್ಥಳೀಯರೂ ಮುಂದೆ ಹೋಗಲು ಹೆದರುತ್ತಿದ್ದಾರೆ ಎನ್ನಲಾಗಿದೆ. ದೇವರ ಸಮಾನರಾದ ಮಕ್ಕಳ ಮೇಲೆ ಘೋರ ಕೃತ್ಯ ಎಸಗಿರುವ ಆರೋಪಿಗೆ ಯಾವುದೇ ಸಮುದಾಯ, ಸಂಘಟನೆಗಳು ರಕ್ಷಣೆಗೆ ಮುಂದಾಗಬಾರದು ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಧನಂಜಯ ಅವರು ಮನವಿ ಮಾಡಿದ್ದಾರೆ. ಮಾ.14ರಂದು ಪ್ರಕರಣ ದಾಖಲಾಗಿದ್ದ ವೇಳೆ ಆರೋಪಿ ಊರಿನಲ್ಲಿ ಆರಾಮವಾಗಿ ಸುತ್ತಾಡಿಕೊಂಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾದವು. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆತನನ್ನು ಬಂಧಿಸಲು ಮುಂದಾಗದ ಪೊಲೀಸ್ ಇಲಾಖೆ ಈಗ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವುದು ವಿಪರ್ಯಾಸ ಎಂದು ಕಲ್ಲಮುಂಡ್ಕೂರು ಗ್ರಾಮಸ್ಥರು ಹೇಳಿದ್ದಾರೆ. ಆರೋಪಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ವಿದ್ಯಾರ್ಥಿನಿಯರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಈತ ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವುದು ಶಾಲೆಯ ಹಳೆ ವಿದ್ಯಾರ್ಥಿನಿಯರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆ ಗಳಿಂದ ತಿಳಿಯುತ್ತಿದೆ. ಈತ ಅಂತರಾಷ್ಟ್ರೀಯ ಮಟ್ಟದ ಆರೋಪಿ ಏನೂ ಅಲ್ಲ. ಹೀಗಿರುವಾಗ ಆತನನ್ನು ಪೊಲೀಸ್ ಇಲಾಖೆ ಹಲವು ದಿನಗಳಿಂದ ಶೋಧ ನಡೆಸುತ್ತಿದ್ದರೂ ಬಂಧನ ಸಾಧ್ಯವಾಗದಿರುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತಿದೆ ಎಂದು ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಯಾನಂದ ಅವರು ಆರೋಪಿಸಿದ್ದಾರೆ.