LATEST NEWS
ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಹುಂಜ…!?
ತೆಲಂಗಾಣ, ಫೆಬ್ರವರಿ 28: ಕೋಳಿ ಕಾಳಗದಲ್ಲಿ ಭಾಗಿಯಾಗಿದ್ದ ಹುಂಜವೊಂದು ತನ್ನ 45 ವರ್ಷದ ಮಾಲೀಕನ ಕೊಲೆಗೆ ಕಾರಣವಾಗಿದ್ದು ಈ ಪ್ರಕರಣ ಸಂಬಂಧ ಪೊಲೀಸರು ಹುಂಜವನ್ನೇ ಕಸ್ಟಡಿಗೆ ತೆಗೆದುಕೊಂಡ ವಿಚಿತ್ರ ಘಟನೆ ತೆಲಂಗಾಣ ರಾಜ್ಯದಲ್ಲಿ ವರದಿಯಾಗಿದೆ.
ಜಗ್ತಿಯಲ್ ಜಿಲ್ಲೆಯ ಲೋಥುನುರ್ ಗ್ರಾಮದ ಯಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಈ ಘಟನೆ ನಡೆದಿದೆ. ಥನುಗುಲ್ಲ ಸತೀಶ್ ಎಂಬಾತ ಕಾನೂನು ನಿರ್ಬಂಧದ ಬಳಿಕವೂ ಕೋಳಿ ಕಾಳಗಕ್ಕೆ ಹುಂಜವೊಂದನ್ನ ತಂದಿದ್ದ. ಕೋಡಿ ಕತ್ತಿ ಎಂದೇ ಕರೆಯಲಾಗುವ ಚಾಕುವನ್ನ ಹುಂಜದ ಕಾಲಿಗೆ ಬಲವಾಗಿ ಕಟ್ಟಿದ್ದ. ಆದರೆ ಇದೇ ಸತೀಶ್ ಜೀವಕ್ಕೆ ಸಂಚಕಾರವಾಗಿ ಪರಿಣಮಿಸಿದೆ.
ಈ ಚಾಕು ಅಕಸ್ಮಾತ್ ಆಗಿ ಸತೀಶ್ ತೊಡೆ ಸಂಧುವಿನಲ್ಲಿ ಬಲವಾದ ಗಾಯವನ್ನ ಮಾಡಿದೆ. ತೀವ್ರ ಗಾಯಗೊಂಡ ಸತೀಶ್ರನ್ನ ಆಸ್ಪತ್ರೆಗೆ ದಾಖಲು ಮಾಡಿದರು ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಸಾವನ್ನಪ್ಪಿದ್ದಾರೆ. ತೆಲಂಗಾಣದಲ್ಲಿ ಕೋಳಿ ಕಾಳಗಕ್ಕೆ ನಿರ್ಬಂಧ ಹೇರಲಾಗಿದ್ದರು ಸಹ ಕೆಲವಷ್ಟು ಮಂದಿ ಸೇರಿಕೊಂಡು ಯಲ್ಲಮ್ಮ ದೇವಸ್ಥಾನದ ಬಳಿಯಲ್ಲಿ ಅಕ್ರಮವಾಗಿ ಕೋಳಿ ಕಾಳಗವನ್ನ ಏರ್ಪಡಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಂಜವನ್ನ ಗೊಲ್ಲಾಪಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈ ಕೋಳಿಯನ್ನ ಬಂಧಿಸಿಟ್ಟ ಪೊಲೀಸರು ಅದಕ್ಕೆ ಬೇಕಾದ ಆಹಾರವನ್ನ ಒದಗಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಒಬ್ಬ ಕೋಳಿ ಕಾಳಗ ಆಯೋಜಕನನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯ ಮಾಧ್ಯಮಗಳಲ್ಲಿ ಪೊಲೀಸರು ಕೋಳಿಯನ್ನ ಬಂಧಿಸಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಎಲ್ಲಾ ವರದಿಗಳನ್ನ ತಳ್ಳಿ ಹಾಕಿದ ಗೊಲ್ಲಪಲ್ಲಿ ಎಸ್ಹೆಚ್ಓ ಬಿ. ಜೀವನ್, ನಾವು ಹುಂಜವನ್ನ ಬಂಧಿಸಿಯೂ ಇಲ್ಲ, ವಶಕ್ಕೂ ಪಡೆದಿಲ್ಲ. ಬದಲಾಗಿ ಅದನ್ನ ರಕ್ಷಿಸಿದ್ದೇವೆ ಹಾಗೂ ಫಾರ್ಮ್ಹೌಸ್ಗೆ ರವಾನಿಸಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.