Connect with us

    DAKSHINA KANNADA

    karnataka Red Alert : ಮುಂದಿನ 4 ವಾರ ರಾಜ್ಯದಲ್ಲಿ ಭಾರಿ ಮಳೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸಿಎಂ ಸೂಚನೆ

    ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕು ವಾರ ಭಾರಿ ಮಳೆಯಾಗಲಿದೆಯೆಂಬ ಹವಾಮಾನ ಇಲಾಖೆ ಮುನ್ಸೂಚನೆ ಕಾರಣ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ರಾಜ್ಯದ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಜೂನ್‌ 1 ರಿಂದ ಆಗಸ್ಟ್‌ 15 ರ ವರೆಗೆ ವಾಡಿಕೆಗಿಂತ ಶೇ. 22 ರಷ್ಟು ಹೆಚ್ಚು ಮಳೆಯಾಗಿದ್ದು, ಚಾಮರಾಜನಗರ, ಮಂಡ್ಯ, ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಿದೆ. 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ಇಡೀ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯಾದ್ಯಂತ 82 ಲಕ್ಷ ಹೆಕ್ಟೇರ್‌ ಗುರಿಗೆ ಎದುರಾಗಿ 7೦ ಲಕ್ಷ ಹೆಕ್ಟೇರ್‌ ಬಿತ್ತನೆ ಆಗಿದೆ. ಈ ಬಾರಿ ಗುರಿ ಮೀರಿ ಸಾಧನೆ ಆಗುವ ನಿರೀಕ್ಷೆ ಇದೆ ಎಂದರು.ಮುಂಗಾರು ಪೂರ್ವ ಬಿತ್ತನೆ ಆಗಿರುವ ಉದ್ದು ಮತ್ತು ಹೆಸರು ಕಟಾವಿಗೆ ಬಂದಿದೆ. ಮಳೆಯಿಂದ 81,589 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಂತಿಮ ವರದಿ ಬಂದ ಕೂಡಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ಏತ ನೀರಾವರಿ ಯೋಜನೆಗಳಡಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಅಂತರ್ಜಲ ಮಟ್ಟ, ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ರಾಜ್ಯದ ಜಲಾಶಯಗಳು ಒಟ್ಟು ಶೇ. 89 ರಷ್ಟು ಭರ್ತಿ ಆಗಿವೆ. ಈ ಹಿನ್ನೆಲೆಯಲ್ಲಿ ಕೆರೆಗಳನ್ನು ತುಂಬಿಸಬೇಕು ಹಾಗೂ ಮಳೆ ಮುನ್ಸೂಚನೆ ಆಧರಿಸಿ, ಮುಂಚಿತವಾಗಿಯೇ ಸೂಕ್ತ ಪ್ರಮಾಣದ ನೀರನ್ನು ಜಲಾಶಗಳಿಂದ ಹೊರಗೆ ಬಿಡುವ ಮೂಲಕ, ಮಳೆಯಾದಾಗ ಜಲಾಶಯಗಳಲ್ಲಿ ಏಕಾಏಕಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವುದನ್ನು ತಡೆಗಟ್ಟಲು ಸಾಧ್ಯವಿದೆ. ಈ ಕುರಿತು ಸರ್ಕಾರದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಇರಬೇಕು ಎಂದು ಸೂಚಿಸಿದರು.

    ಸೇತುವೆಗಳ ಫಿಟ್‌ನೆಸ್‌ಗಳ ಬಗ್ಗೆ ವರದಿಯನ್ನು ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕು. ಸಂಪರ್ಕ ರಸ್ತೆಗಳು ಕುಸಿದಿದ್ದರೆ ಅವುಗಳನ್ನು ಸರಿಪಡಿಸಿ, ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಎಲ್ಲಾ ಸೇತುವೆ, ರಸ್ತೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಮುಳುಗು ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸಂಚರಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಒಟ್ಟು 67 ಸಾವು ಸಂಭವಿಸಿದ್ದು, 66 ಪ್ರಕರಣಗಳಲ್ಲಿ 329 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಅಂಗನವಾಡಿ, ಶಾಲೆ ಕಟ್ಟಡಗಳು, ಸೇತುವೆಗಳು, ಕೆರೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.ಮಲೆನಾಡು, ಕರಾವಳಿ ಭಾಗಗಳಲ್ಲಿ ಇರುವ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿ, ಕ್ರಿಯಾ ಯೋಜನೆಯಲ್ಲಿ ಆದ್ಯತೆ ಮೇರೆಗೆ ದುರಸ್ತಿಪಡಿಸಬೇಕು ಎಂದು ನಿರ್ದೇಶಿಸಿದರು.ರಾಜ್ಯದಲ್ಲಿ ಈ ಬಾರಿ ಒಟ್ಟು 1,283 ಮನೆಗಳು ಶೇ. 75 ಕ್ಕಿಂತ ಹೆಚ್ಚು ಹಾನಿಗೊಳಗಾಗಿದೆ. ಅದರಲ್ಲಿ 879 ಪ್ರಕರಣಗಳಲ್ಲಿ ತಲಾ 1.2೦ ಲಕ್ಷ ರೂ. ನಂತೆ 10.54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರೊಂದಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗುವುದು. ಈಗಾಗಲೇ 500 ಮನೆ ಮಂಜೂರು ಮಾಡಲಾಗಿದೆ. 2,817 ಕುಟುಂಬಗಳಿಗೆ ಬಟ್ಟೆ ಬರೆ ಹಾನಿಗಾಗಿ 2,500 ರೂ. ನಂತೆ ಹಾಗೂ 2,811 ಕುಟುಂಬಗಳಿಗೆ ಗೃಹೋಪಯೋಗಿ ಸಾಮಗ್ರಿಗಳ ಹಾನಿಗೆ ತಲಾ ರೂ.2,500 ರಂತೆ ಒಟ್ಟು 1.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.ಪಂಚಾಯತ್‌ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ತಲಾ 20 ಸಾವಿರ ರೂ. ಅನುದಾನ ಒದಗಿಸಲಾಗಿದೆ. ಸಾವು ನೋವು ತಪ್ಪಿಸುವುದು ನಮ್ಮ ಆದ್ಯತೆಯಾಗಿದ್ದು, ಗ್ರಾಮ ಪಂಚಾಯತ್‌ ಟಾಸ್ಕ್‌ ಫೋರ್ಸ್‌ ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಮನೆ ಕುಸಿತ, ನೀರಿನಲ್ಲಿ ಕೊಚ್ಚಿ ಹೋಗುವಂತಹ ಪ್ರಕರಣಗಳಲ್ಲಿ ಸಾವು ನೋವು ತಪ್ಪಿಸಲು ಸಾಧ್ಯವಿದೆ. ಶಿಥಿಲವಾದ ಮನೆಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಗ್ರಾಮಮಟ್ಟದಲ್ಲಿ ಮೊದಲೇ ಗುರುತಿಸಬೇಕು ಎಂದು ಹೇಳಿದರು.ರಾಜ್ಯದಲ್ಲಿ ಮನೆ ಕುಸಿದು 29 ಸಾವು ಸಂಭವಿಸಿದ್ದು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಪ್ರವಾಹ ಇರುವಾಗ ನೀರಿಗೆ ಇಳಿಯಲು ಬಿಡಬಾರದು, ಪೊಲೀಸರ ಸಹಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತ್‌, ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಈ ನಿಟ್ಟಿನಲ್ಲಿ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಗಳೂರು ನಗರದಲ್ಲಿ ಕಂಟ್ರೋಲ್‌ ರೂಂ ಗಳನ್ನು ಗುರುತಿಸಲಾಗಿದೆ. ದೊಡ್ಡ ಚರಂಡಿಗಳು ಓಪನ್‌ ಇರುವ ಸ್ಥಳಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್‌ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಕೋಡಿಗೆ ಗೇಟ್‌ ಅಳವಡಿಸುವ ಮೂಲಕ, ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಬೇಕು ಎಂದು ಸೂಚಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply