DAKSHINA KANNADA
ಅಡಿಕೆ ಬೆಲೆ ಏರಿಕೆಯಾಗುತ್ತಲೇ ಕಳ್ಳರ ಕಾಟ – ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಬೆಳ್ತಂಗಡಿ: ಅಡಿಕೆ ಬೆಲೆ ದಾಖಲೆ ಮಟ್ಟಕ್ಕೆ ಏರುತ್ತಲೆ ಕಳ್ಳರ ಹಾವಳಿ ಹೆಚ್ಚಾಗಿದ್ದು ಗುರುವಾರ ಮುಂಜಾನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿ 50 ಕೆ.ಜಿ. (14) ಗೋಣಿ ಅಡಿಕೆ ಸಹಿತ ಇಬ್ಬರು ಆರೋಪಿಗಳನ್ನು ಸ್ಥಳೀಯರಾದ ಕರಾಟೆ ಕಿಟ್ಟ ಎಂಬುವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದೂವರೆ ತಿಂಗಳುಗಳಿಂದ ಪಿಲಿಗೂಡು, ದೇವರುಪಲಿಕೆ ಆಸುಪಾಸಿನಲ್ಲಿ ಅಡಿಕೆ ಕಳ್ಳ ಸಾಗಾಣಿಕೆ ನಡೆಯುತ್ತಿದ್ದು, ಕಳ್ಳರ ಪತ್ತೆಗಾಗಿ ಸ್ಥಳೀಯರೇ ಕಾರ್ಯಾಚರಣೆಗೆ ಇಳಿದಿದ್ದರು.
ಚುನಾವಣೆ ಸಮಯವಾದ್ದರಿಂದ ಕೃಷಿಕರ ಬಂದೂಕು ಠಾಣೆಯಲ್ಲಿ ಡೆಪಾಸಿಟ್ ಇಟ್ಟಿರುವುದರಿಂದ ಕಳ್ಳಕಾಕರಿಗೆ ವರದಾನ ವಾದಂತಿದೆ. ಗುರುವಾರ ಬೆಳಗ್ಗೆ ಮಚ್ಚಿನ ಪುಂಚಪಾದೆಯಲ್ಲಿ ಅಡಿಕೆ ಗೋಣಿ, ಅಡಿಕೆ ಸುಲಿಯುವ ಮಣೆ ಎಲ್ಲವೂ ಪತ್ತೆಯಾಗಿದೆ. ಕರಾಟೆ ಕಿಟ್ಟ ಎಂಬುವರು ಒಬ್ಬನನ್ನು ಹಿಡಿದು, ಪೊಲೀಸರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದು, ಓರ್ವ ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಪೂಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಡಿಕೆ ಕಳ್ಳರನ್ನು ಹಾಗೂ ಸುತ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ