LATEST NEWS
ಆಕ್ರೋಶಕ್ಕೆ ಬೆದರಿ ವಿಡಿಯೋ ಮೂಲಕ ಕ್ಷಮೆ ಕೇಳಿದ ಕೊರಗಜ್ಜನಿಗೆ ಅಪಮಾನ ಮಾಡಿದ್ದ ಮದುಮಗ
ಮಂಗಳೂರು ಜನವರಿ 8: ಕರಾವಳಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೊರಗಜ್ಜನ ವೇಷ ಧರಿಸಿ ಅಪಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೇಷಧರಿಸಿ ಕುಣಿದಾಡಿದ್ದ ಮದುಮಗ ಬಾತಿಷ್ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ.
ಕಳೆದ ಬುಧವಾರ ನಡೆದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಬರುವ ಸಂದರ್ಭ ಮದುಮಗ ಕೊರಗಜ್ಜನ ರೀತಿ ವೇಷ ಭೂಷಣ ಹಾಕಿ ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ವೀಡಿಯೋಗಳು ವೈರಲಾಗುತ್ತಿದ್ದಂತೆ ಹಿಂದೂ ಸಮುದಾಯ ಸೇರಿದಂತೆ ಕರಾವಳಿಯ ಎಲ್ಲಾ ಧರ್ಮೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಮದುಮಗನ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಹಿಂದೂ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆಗೆ ನಿರ್ಧರಿಸಿದ್ದವು. ಮುಸ್ಲೀಂ ಸಮುದಾಯದವರು ಕೂಡ ಮದುಮಗನ ಈ ಹುಚ್ಚಾಟ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಕಂಗೆಟ್ಟ ಮದುಮಗ ಬಾತಿಷ್ ಕೇರಳದ ಅಜ್ಞಾತ ಸ್ಥಳದಿಂದ ವೀಡಿಯೋ ಮೂಲಕ ಕ್ಷಮಾಪಣೆ ಕೇಳುತ್ತಾ ವಿಷಾದ ವ್ಯಕ್ತಪಡಿಸಿದ್ದಾನೆ.
ನಾನು ತನ್ನ ಸ್ನೇಹಿತರ ಜೊತೆ ಎಂಜಾಯ್ ಮಾಡುವುದಕ್ಕಾಗಿ ಈ ರೀತಿ ಮಾಡಿದ್ದೇನೆಯೇ ಹೊರತು ಯಾವುದೇ ಸಮುದಾಯಕ್ಕಾಗಲೀ, ದೈವಕ್ಕಾಗಲೀ, ಜನರ ನಂಬಿಕೆಗಾಗಲೀ ದ್ರೋಹ, ಅವಮಾನ ಮಾಡುವ ಉದ್ಧೇಶವಿಲ್ಲ. ಮುಸ್ಲಿಂ ಸಮುದಾಯಕ್ಕೂ ಅವಮಾನ ಎಸಬೇಕೆಂಬ ಉದ್ದೇಶ ನನಗಿಲ್ಲ ಎಂದು ಕ್ಷಮೆ ಕೇಳಿದ್ದಾನೆ.