FILM
ಕನ್ನಡಕ್ಕೆ “8”ರ ಮೂಲಕ ಅನುರಾಗ್ ಕಶ್ಯಪ್

ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ‘8’ ಎಂಬ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಅನುರಾಗ್ ಕಶ್ಯಪ್ ತಮಿಳಿನ ‘ಮಹಾರಾಜ’ ಚಿತ್ರದಲ್ಲಿ ನಟಿಸಿದ್ದರು. ಬಳಿಕ ತೆಲುಗು ಚಿತ್ರವೊಂದರಲ್ಲಿ ಪೊಲೀಸ್ ಅಧಿಕಾರಿಯಾಗಿ ಬಣ್ಣಹಚ್ಚಿದ್ದರು. ಇದೀಗ ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣ ಮಾಡುತ್ತಿರುವ ಕನ್ನಡ ಚಿತ್ರವನ್ನು ಅನುರಾಗ್ ಒಪ್ಪಿಕೊಂಡಿದ್ದಾರೆ. ಫುಟ್‌ಬಾಲ್ ಆಟದ ಸುತ್ತ ನಡೆಯುವ ಕಥೆ ‘8’ ಚಿತ್ರದಲ್ಲಿದೆ.

‘ಇದೊಂದು ಭಾವನಾತ್ಮಕ ಕಥೆ. ಈ ಸಿನಿಮಾ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕುರಿತಾಗಿದೆ. ಕಥೆ ಅದ್ಭುತವಾಗಿದೆ. ನನಗೆ ಹಲವು ಭಿನ್ನ ಪಾತ್ರಗಳನ್ನು ನಿರ್ದೇಶಕರು ಬರೆಯುತ್ತಿರುವುದು ಖುಷಿಯ ವಿಚಾರ. ನಾನು ಕಥೆ ಹೇಳಲೆಂದೇ ಚಿತ್ರರಂಗಕ್ಕೆ ಬಂದೆ. ಅದ್ಭುತವಾದ ಕಥೆಗಳನ್ನು ಹೇಳುವವರ ಅವಶ್ಯಕತೆ ಇಂದಿಗಿದೆ. ಕನ್ನಡ ಸಿನಿಮಾಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುತ್ತಿದ್ದೇನೆ. ರಾಜ್ ಬಿ.ಶೆಟ್ಟಿಗೆ ನಿರ್ದೇಶನ ಮಾಡಬೇಕು ಎಂಬ ಆಸೆಯಿದೆ’ ಎಂದರು ಅನುರಾಗ್ ಕಶ್ಯಪ್.