LATEST NEWS
ಕನ್ಹಯ್ಯ ಕೊಲೆ ಮಾಸುವ ಮುನ್ನವೇ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ
ಮುಂಬೈ, ಜುಲೈ 02: ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಾಲಾಲ್ ಹತ್ಯೆ ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮೆಡಿಕಲ್ ಶಾಪ್ ಮಾಲೀಕ ಉಮೇಶ್ ಕೊಲ್ಹೆ (54) ಕೊಲೆಯಾದ ವ್ಯಕ್ತಿ. ಈ ಘಟನೆ ಜೂನ್ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈತನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ.
ಉಮೇಶ್ ಕೊಲ್ಹೆ ಸೋಷಿಯಲ್ ಮೀಡಿಯಾದಲ್ಲಿ ನೂಪುರ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ್ದ. ಇದರಿಂದಾಗಿ ಆತನ ಮೇಲೆ ಕೋಪಗೊಂಡ ದುಷ್ಕರ್ಮಿಗಳು ಉಮೇಶ್‍ನನ್ನು ಹತ್ಯೆ ಮಾಡಿದ್ದಾರೆ.ಉಮೇಶ್ ಕೋಲ್ಹೆ ಅವರ ಪುತ್ರ ಸಂಕೇತ್ ನೀಡಿದ ದೂರು ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22) ಬಂಧಿತ ಆರೋಪಿಗಳಾಗಿದ್ದರೇ, ಹಮೀಮ್ ಅಹ್ಮದ್ ಫಿರೋಜ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ.
ಉಮೇಶ್ ಕೋಲ್ಹೆ ಅವರು ಜೂನ್ 21 ರಂದು ರಾತ್ರಿ 10:30ರ ಸುಮಾರಿಗೆ ಮೆಡಿಕಲ್ ಸ್ಟೋರ್ ಅನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಆತನ ಪತ್ನಿ ಮತ್ತು ಮಗನು ಇದ್ದರು. ಮಹಿಳಾ ಕಾಲೇಜು ಪ್ರೌಢಶಾಲೆಯ ಗೇಟ್ ಬಳಿ ಬೈಕ್‍ನಲ್ಲಿ ಮೂವರು ದುಷ್ಕರ್ಮಿಗಳು ಉಮೇಶ್‍ನನ್ನು ಅಡ್ಡಗಟ್ಟಿದರು. ಅವರಲ್ಲಿ ಒಬ್ಬಾತ ಉಮೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅಲ್ಲೇ ಇದ್ದ ಉಮೇಶ್‍ನ ಪತ್ನಿ ಮತ್ತು ಮಗ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್‍ನ್ನು ಹೆಚ್ಚಿನ ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರು ಬಂಧಿತ ಆರೋಪಿಗಳು, ತಮಗೆ ಕಾರು ಮತ್ತು ಓಡಿಹೋಗಲು 10,000 ರೂ.ಗಳನ್ನು ಒದಗಿಸಿದ ಮತ್ತೊಬ್ಬ ಆರೋಪಿಯ ಸಹಾಯವನ್ನು ಕೋರಿರುವುದಾಗಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.