BELTHANGADI
ಧರ್ಮಸ್ಥಳ ಪ್ರಕರಣ – ಮೂರನೇ ದಿನದ ಕಾರ್ಯಾಚರಣೆ ಅಂತ್ಯ – ಸಿಗದ ಸಾಕ್ಷಿ ಖಾಲಿ ಕೈಯಲ್ಲಿ ಹಿಂದಿರುಗಿದ ಎಸ್ಐಟಿ

ಬೆಳ್ತಂಗಡಿ ಜುಲೈ 30: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ ಸ್ಥಳಗಳನ್ನು ಸಾಕ್ಷಿಗಾಗಿ ಅಗೆಯುವ ಕಾರ್ಯ ಮುಂದುವರೆದಿದ್ದು, ಇಂದು ಕೂಡ ಯಾವದೇ ರೀತಿಯ ಅಸ್ಥಿ ಪಂಜರ ದೊರೆತಿಲ್ಲ ಎಂದು ವರದಿಯಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ದೂರಿನ ಹಿನ್ನಲೆ ರಾಜ್ಯ ಸರಕಾರ ನೇಮಿಸಿರುವ ಎಸ್ ಐಟಿ ತಂಡ ತನಿಖೆ ಮುಂದುವರೆಸಿದೆ. ಅನಾಮಿಕ ಗುರುತು ಮಾಡಿರುವ ಜಾಗಗಳಲ್ಲಿ ಅಗೆಯುವ ಕಾರ್ಯ ಇಂದು ಕೂಡ ನಡೆಸಲಾಗಿದೆ ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಕೊನೆಗೊಂಡಿದ್ದು ಯಾವುದೇ ಕಳೇಬರ ದೊರೆತಿಲ್ಲ.
ಇನ್ನು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಎಸ್.ಐ.ಟಿ. ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರ್ಯಾಚರಣೆ ಮುಗಿದ ಬಳಿಕ ತನಿಖಾಧಿಕಾರಿಗಳಾದ ಅನುಚೇತ್, ಎಸ್ಪಿ ಸಿ.ಎ.ಸೈಮನ್ ಜತೆಗಿದ್ದು ಕಾರ್ಯಾಚರಣೆ ಮುಗಿದ ಬಳಿಕ ಅನಾಮಿಕನನ್ನು ಎಸ್.ಐ.ಟಿ. ಕಚೇರಿಗೆ ಕರೆದೊಯ್ದಿದ್ದಾರೆ. ನಾಳೆ ಕೂಡ ದೂರುದಾರ ಮಾರ್ಕ್ ಮಾಡಿರುವ 6 ಪಾಯಿಂಟ್ ಬಳಿ ಕಳೇಬರಕ್ಕಾಗಿ ಶೋಧ ಕಾರ್ಯ ನಡೆಯಲಿದೆ. ಈ ಮಧ್ಯೆ ಅನಾಮಿಕ ಪರ ನ್ಯಾಯವಾದಿ, ಮಂಜುನಾಥ್ ಎನ್. ಎಂಬವರ ಹೆಸರಲ್ಲಿ ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಪತ್ರವೊಂದು ಸಿಕ್ಕಿದೆ ಎಂಬ ಪ್ರೆಸ್ ನೋಟ್ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.