KARNATAKA
ಅಂಕೋಲಾ : ಶಿರೂರು ಗುಡ್ಡ ಕುಸಿತ, 10ನೇ ದಿನವೂ ಮುಂದುವರೆದ ಕಾರ್ಯಾಚರಣೆ ಮಣ್ಣಲ್ಲಿ ಕೊಚ್ಚಿಹೋದ ಟ್ರಕ್ ಪತ್ತೆ..!
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್‌ಡ ಕುಸಿತದ ಸ್ಥಳದಲ್ಲಿ 10 ನೇ ದಿನವೂ ಕಾರ್ಯಾಚರಣೆ ಮುಂದುವೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಮೊಬೈಲ್ ಸ್ವಿಚ್ ಆನ್ ಆಗಿರುವ ಕೇರಳದ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆ ಇಂದು ಮುಂಜಾನೆಯಿಂದಲೇ ಆರಂಭವಾಗಿದೆ. ಈಗಾಗಲೇ ನದಿಯ ಒಳಗಡೆ ಪತ್ತೆಯಾಗಿರುವ ಟ್ರಕ್ ಅನ್ನು ಮೇಲೆತ್ತಲು ಸೇನೆಯ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಮೂಲತಾ ಕೇರಳದವರಾದ ಮೇಜರ್ ಎಂ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಇಂದಿನ ಕಾರ್ಯಾಚರಣೆ ಬೆಳಗ್ಗೆ 7.30ಕ್ಕೆ ಆರಂಭಿಸಲಾಗಿದೆ.ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ಹೊರತು ಪಡಿಸಿ ಉಳಿದವರಿಗೆ ನಿಷೇಧಿಸಲಾಗಿದೆ. ಕೇರಳ ಮೂಲದ ಅರ್ಜುನ್ ಓಡಿಸುತ್ತಿದ್ದ ಭಾರತ್ ಬೆಂಜ್ ಟ್ರಕ್ ಗಂಗಾವಳಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿತ್ತು. ಈ ಟ್ರಕ್‌ನೊಳಗೆ ಅರ್ಜುನ್ ಇದ್ದಾನೆಯೇ ಎಂಬುದನ್ನು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಟ್ರಕ್ ದಡದಿಂದ 20 ಮೀಟರ್ ದೂರದಲ್ಲಿ ನದಿಯಲ್ಲಿ 15 ಮೀಟರ್ ಆಳದಲ್ಲಿದೆ ಎನ್ನಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಮೊದಲ ಹಂತವೆಂದರೆ ಮಣ್ಣನ್ನು ತೆಗೆದುಹಾಕುವುದು. ಮಣ್ಣು ಸರಿಸಲು ಬೃಹತ್ ಪೊಕ್ಲೇನ್ ಯಂತ್ರ ತರಿಸಲಾಗಿದೆ. ನೌಕಾಪಡೆಯ ಡೈವರ್‌ಗಳನ್ನು ಸ್ಥಳದಲ್ಲಿನ ನಿಯೋಜಿಸಲಾಗಿದೆ. ಕೆಸರುಮಯ ನದಿಪಾತ್ರದಲ್ಲಿ ಕಾರ್ಯಾಚರಣೆ ಸೇನಾಪಡೆಗೆ ಸವಾಲಾಗಿದೆ. ಒಂದು ವೇಳೆ ನಾಪತ್ತೆಯಾಗಿರುವ ಚಾಲಕ ಅರ್ಜುನ್ ಸೇರಿದಂತೆ ಇತರೆ ಮೂವರ ಶವ ಇಂದು ದೊರೆತಲ್ಲಿ ಇಂದಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ವಿವಿಧ ಜಿಲ್ಲೆಗಳಲ್ಲಿ ರಜೆ ಘೋಷಣೆ
ಕಾರಾವಾರ: ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ ಮುಂದುವರಿದ ಹಿನ್ನಲೆಯಲ್ಲಿ ಇಂದು ಜಿಲ್ಲೆಯ 7 ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಆದೇಶ ಹೊರಡಿಸಿದ್ದಾರೆ. ಶಾಲೆ, ಪದವಿ ಪೂರ್ವ, ಡಿಪ್ಲೋಮಾ, ಐಟಿಐ ಕಾಲೇಜುಗಳಿಗೆ ಮಾತ್ರ ರಜೆ ಎಂದು ಸೂಚಿಸಲಾಗಿದೆ.
ಧಾರವಾಡ / ಕೊಡಗು: ನಿರಂತರ ಮಳೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಶಾಲಾ ಕಾಲೇಜಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ರಜೆ ಘೋಷಿಸಿದ್ದಾರೆ. ಅಂಗನವಾಡಿ ಸೇರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆಯಾಗಿದೆ. ಜತೆಗೆ ಕೊಡಗಿನ 2 ಕ್ಷಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ರಜೆ ಸಾರಲಾಗಿದೆ.
ಇದನ್ನು ಓದಿ..
ಅಂಕೋಲಾ ಗುಡ್ಡ ಕುಸಿತ ಕಾರ್ಯಾಚರಣೆ, 10 ದಿನವೂ ಸಿಗದ ಕೇರಳದ ಟ್ರಕ್ ಚಾಲಕ ಅರ್ಜುನನ ಕುರುಹು..!