ಗುಡ್ಡ ಕುಸಿತದಿಂದಾಗಿ ಕಣ್ಮರೆಯಾಗಿರುವ ಮೂವರು ಮತ್ತು ನದಿ ಪಾಲಾಗಿರುವ ವಾಹನಗಳ ಶೋಧಕ್ಕೆ ಮಂಗಳವಾರ ಸಂಜೆ ಶಾಸಕ ಸತೀಶ ಸೈಲ್ ಬಂದು ಕಾರ್ಯಾಚರಣೆ ಶುರು ಮಾಡಲು ಸೂಚಿಸಿದ ಹಿನ್ನೆಯಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ಶುರು ಮಾಡಿತ್ತು. ಈ ಸಂದರ್ಭ ನದಿ ಆಳದಲ್ಲಿ ನಾಪತ್ತೆಯಾಗಿರುವ ಕೇರಳದ ಚಾಲಕ ಅರ್ಜುನ್ ಲಾರಿಯ ಜ್ಯಾಕ್ ಮತ್ತು ಬೇರೆ ವಾಹನಗಳ ಬಿಡಿಭಾಗಗಳು ಪತ್ತೆಯಾಗಿದ್ದು ಗಂಗಾವಳಿ ನದಿಯಲ್ಲಿ ಮುಳುಗಿ ಈ ವಸ್ತುಗಳನ್ನು ಈಶ್ವರ್ ಮಲ್ಪೆ ತಂಡ ಮೇಲಕ್ಕೆತ್ತಿದೆ. ಸಿಕ್ಕಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿಯದು ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.
ಮಳೆ ನಿಂತು ಬಿಸಿಲು ಬಿದ್ದಿರುವುದು ಮತ್ತು ನದಿ ನೀರಿನ ಮಟ್ಟ ಇಳಿದಿರುವುದು ಕಾರ್ಯಾಚರಣೆಗೆ ಅನುಕೂಲವಾಗಿದೆ. ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಯಲಿದೆ. ಜುಲೈ 16 ರಂದು ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ್ದು ಘಟನೆ ನಡೆದು ಸುಮಾರು ಒಂದು ತಿಂಗಳು ಸಮೀಪಿಸಿದೆ. ಕುಸಿತ ಸಂಭವಿಸಿದ ಸುಮಾರು 16 ದಿನಗಳ ವರೆಗೆ ಶೋಧ ಕಾರ್ಯ ನಡೆಸಲಾಗಿತ್ತಾದರೂ ಭಾರೀ ಮಳೆಯಿಂದಾಗಿ ಗಂಗಾವಳಿ ನದಿಯ ಒಳ ಹರಿವು ಹೆಚ್ಚಾಗಿ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದ್ದರಿಂದ ಶೋಧ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಆರಂಭವಾಗಿದೆ.