LATEST NEWS
ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣ – ಸಿಐಡಿಗೆ ಒಪ್ಪಿಸಲು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ
ಉಡುಪಿ ಸೆಪ್ಟೆಂಬರ್ 10: ಎಂಬಿಎ ಪದವೀಧರೆ ಅನಿಶಾ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸುವಂತೆ ಅನಿಶಾ ಅವರ ತಾಯಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಪ್ರೀತಿಯ ಪಾಶಕ್ಕೆ ತಲೆಯೊಡ್ಡಿ ಎಂಬಿಎ ಪದವೀಧರೆ ಅನಿಶಾ ಪ್ರಾಣ ಕಳೆದುಕೊಂಡಿದ್ದರು. ಸಾವಿಗೂ ಮುನ್ನ ಗೆಳೆಯ ಚೇತನ್ ಮೇಲೆ ಆರೋಪ ಹೊರಿಸಿ ನಾಲ್ಕು ಪುಟ ಡೆತ್ ನೋಟ್ ಬರೆಯಲಾಗಿತ್ತು. ಅನಿಶಾ ಮತ್ತು ಚೇತನ್ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರ ಮನೆಗಳಲ್ಲಿ ರಾದ್ಧಾಂತ ಆಗಿ ಮದುವೆ ಸಾಧ್ಯವಿಲ್ಲ ಎಂದಾಗ ಅನಿಶಾ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅನಿಶಾ ಸಾವಿನ ತನಿಖೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಪ್ರಕರಣ ಪ್ರಮುಖ ಆರೋಪಿ ಚೇತನ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಅನಿಶಾ ಪೂಜಾರಿಯ ಸಾವಿಗೆ ಸಂಬಂಧಿಸಿದಂತೆ ದೊರಕಿರುವ ಸಾಕ್ಷ್ಯ ಮತ್ತು ದೃಶ್ಯ ಚಿತ್ರದಿಂದ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಇದೀಗ ಅನಿಶಾ ಪೂಜಾರಿ ಸಾವಿನ ಕುರಿತು ಬಹಳಷ್ಟು ಸಂಶಯ ಮೂಡಿ ಬಂದಿರುವುದರಿಂದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತಿದೆ. ಹೀಗಾಗಿ ಹೈ ಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಎಂಬಿಎ ಉತ್ತೀರ್ಣಳಾಗಿದ್ದ ಅನಿಶಾ ಪೂಜಾರಿ ಪ್ರೀತಿ ವಿಚಾರದಲ್ಲಿ ಸೋತಿದ್ದಳು. ಪ್ರಾಣ ಅರ್ಪಣೆ ಮಾಡಿದ್ದಳು. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಚೇತನ್ ಶೆಟ್ಟಿಗೆ ಶಿಕ್ಷೆಯಾಗಬೇಕು ಎಂದು ಆಕೆಯ ಕುಟುಂಬ ಕಣ್ಣೀರಿಡುತ್ತಿದೆ. ಇದೀಗ ತನಿಖೆ ವಿಳಂಬ ಹಿನ್ನೆಲೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಕುಟುಂಬಸ್ಥರು ರಿಟ್ ಸಲ್ಲಿಸಿದ್ದಾರೆ.