KARNATAKA
ಮಗು ಸಾವಿಗೆ ಅಂಗನವಾಡಿ ಸಿಬ್ಬಂದಿಯ ಲಸಿಕೆ ಓವರ್ ಡೋಸ್ ಕಾರಣವಾಯ್ತ..!?
ಹುಬ್ಬಳ್ಳಿ : ಅಂಗನವಾಡಿ ಕೇಂದ್ರದ ಸಿಬ್ಬಂದಿ ಎಡವಟ್ಟಿನಿಂದ ಲಸಿಕೆ ಓವರ್ ಡೋಸ್‌ನಿಂದ ಮಗು ಸಾವನ್ನಪ್ಪಿದ ಆರೋಪ ಹುಬ್ಬಳ್ಳಿ ನಗರದ ಉಣಕಲ್ನಲ್ಲಿ ಕೇಳಿ ಬಂದಿದೆ.
ಒಂದೇ ದಿನ ಮಗುವಿಗೆ 5 ಲಸಿಕೆ ಹಾಕಿದ್ದ ಪರಿಣಾಮ ಓವರ್ ಡೋಸ್‌ನಿಂದ ಮಗು ಮೃತಪಟ್ಟಿದೆ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯ ಉಣಕಲ್ ನ ನಿವಾಸಿ ಜಟ್ಟೆಪ್ಪರ ಮೊಮ್ಮಗ ಧ್ರುವ (2 ವರ್ಷ) ಮೃತ ಮಗುವಾಗಿದೆ. ತಾತ ಹಾಗೂ ಅಜ್ಜಿಯ ಮನೆಯಲ್ಲಿ ಧ್ರುವ ವಾಸವಿದ್ದ. ಬುಧವಾರ ಹುಬ್ಬಳ್ಳಿಯ ಸಾಯಿನಗರದ ಅಂಗನವಾಡಿ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಲಸಿಕೆ ಹಾಕಿದ್ದರು. ಲಸಿಕೆ ಹಾಕಿದ ಬಳಿಕ ತೀವ್ರ ಜ್ವರ, ಹೊಟ್ಟೆ ನೋವಿನಿಂದ ಮಗು ಬಳಲಿದ್ದು, ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಮಗುವಿನ ಅಜ್ಜಿ ದಾಖಲಿಸಿದ್ದರು. ಕಿಮ್ಸ್ಗೆ ದಾಖಲಾಗುತ್ತಿದ್ದಂತೆಯೇ ಮಗು ಸಾವನ್ನಪ್ಪಿದೆ. ಆಸ್ಪತ್ರೆ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಗು ಕಿಮ್ಸ್ನಲ್ಲಿ ದಾಖಲಾಗಿತ್ತು. ಮಗು ನಮ್ಮಲ್ಲಿ ಬಂದಾಗ ಮೃತಪಟ್ಟಿತ್ತು. ಮಗುವಿನ ಉಸಿರಾಟ ಇರಲಿಲ್ಲ. ಮಗುವಿಗೆ ತಾಜ ನಗರದಲ್ಲಿ ಲಸಿಕೆ ಹಾಕಿಸಿದ್ದಾರೆ. 16 ರಿಂದ 24 ತಿಂಗಳ ಮಗುವಿಗೆ ಲಸಿಕೆ ಕೊಡಬೇಕು. ಅದೇ ರೀತಿ ಅಂಗನವಾಡಿಯಲ್ಲಿ ಲಸಿಕೆ ಹಾಕಿದ್ದಾರೆ. ಅಕಸ್ಮಾತ್ ಮಗುವಿಗೆ ಲಸಿಕೆ ರಿಯಾಕ್ಷನ್ ಆಗಿದ್ದರೆ ನಿನ್ನೆಯೇ ಆಗಬೇಕಿತ್ತು. ಆದರೆ ಲಸಿಕೆ ರಿಯಾಕ್ಟ್ ಆಗಿರುವ ತರಹ ಕಾಣುತ್ತಿಲ್ಲ. ಮಗು ಸಾವಿಗೆ ನಿಖರ ಕಾರಣ ತಿಳಿತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.